

ಕಳಸ ಲೈವ್ ವರದಿ
ಕಳಸ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಪವಿತ್ರವಾದ ಮುಕ್ಕೋಟಿ ದ್ವಾದಶಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
33 ಕೋಟಿ ದೇವತೆಗಳು ವೈಕುಂಠದ ಉತ್ತರ ದ್ವಾರದಿಂದ ಮಹಾವಿಷ್ಣುವಿನ ದರ್ಶನ ಪಡೆಯುತ್ತಾರೆ ಎಂಬ ಪುರಾಣೋಕ್ತಿ ಹಿನ್ನೆಲೆಯಲ್ಲಿ, ದೇವಾಲಯದ ದ್ವಾರವನ್ನು ಬೆಳಗಿನ ಜಾವವೇ ವಿಶೇಷವಾಗಿ ತೆರೆಯಲಾಯಿತು. ಭಕ್ತರು ದೀರ್ಘ ಸಾಲಿನಲ್ಲಿ ನಿಂತು ದ್ವಾರ ದರ್ಶನ’ ಪಡೆದರು.
ಬೆಳಗ್ಗೆ ದೇವಾಲಯದಲ್ಲಿ ವೇದಘೋಷ, ಮಂಗಳವಾಧ್ಯ ಮಧ್ಯೆ ಶ್ರೀ ವೆಂಕಟರಮಣಸ್ವಾಮಿಯ ಪಲ್ಲಕ್ಕಿ ಉತ್ಸವವು ವಿಜೃಂಭಣೆಯಿAದ ಆರಂಭವಾಗಿ, ರುದ್ರಪಾದಕ್ಕೆ ಸಾಗಿತು. ಅಲ್ಲಿ ಶ್ರೀಸ್ವಾಮಿಗೆ ವೈದಿಕ ಸಂಪ್ರದಾಯದAತೆ ಅಭಿಷೇಕ ನೆರವೇರಿತು. ನಂತರ ಕಟ್ಟೆಪೂಜೆ ನೆರವೇರಿತು. ದೇವಸ್ಥಾನದ ಪರಿವಾರ ಮತ್ತು ಭಕ್ತ ಸಮುದಾಯದ ಸಹಭಾಗಿತ್ವದಲ್ಲಿ ಉಪಹಾರ ಸೇವೆಯೊಂದಿಗೆ ಮಹಾಪೂಜೆ ನಡೆಯಿತು.
ಸಂಜೆ ವೇಳೆಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಪೇಟೆ ಉತ್ಸವ ನಡೆಯಿತು.ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ವೆಂಕಟರಮಣಸ್ವಾಮಿಯ ಭವ್ಯ ಮೆರವಣಿಗೆಯು ಭಕ್ತರನ್ನು ಆಕರ್ಷಿಸಿತು.
