ಕಳಸ ಲೈವ್ ವರದಿ
ಕರ್ನಾಟಕದಲ್ಲಿ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಗೆ ಸಂಬAಧಿಸಿದ ಗಂಭೀರ ಅಸಮರ್ಪಕತೆಗಳ ಪರಿಣಾಮವಾಗಿ ರೈತರು ಸಂಕಷ್ಟದಲ್ಲಿರುವ ವಿಷಯವನ್ನು ಉಡುಪಿ–ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಗಮನಕ್ಕೆ ತಂದಿದ್ದಾರೆ. ವಿಮಾ ಕಂಪನಿಗಳ ತಾರತಮ್ಯ, ಮಟ್ಟದ ತಪ್ಪು ದಾಖಲೆಗಳು ಮತ್ತು ಪರಿಹಾರ ಮಂಜೂರಾತಿಯಲ್ಲಿನ ಅನ್ಯಾಯದಿಂದ ಬೆಳೆ ನಷ್ಟ ಅನುಭವಿಸಿದ ಸಾವಿರಾರು ರೈತರು ಪರಿಹಾರಕ್ಕಾಗಿ ನಿರೀಕ್ಷಿಸುತ್ತಿರುವ ವಿಷಯ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಮಳೆ ಮಾಪಕಗಳನ್ನು ಅಳವಡಿಸಿರುವುದಿದ್ದರೂ, ಅವುಗಳ ಅಸಮರ್ಪಕ ನಿರ್ವಹಣೆಯಿಂದ ಮಳೆಯ ಪ್ರಮಾಣ ಸರಿಯಾಗಿ ದಾಖಲಾಗದೇ, ರೈತರು ವಿಮೆ ಪಡೆಯುವ ಹಕ್ಕನ್ನು ಕಳೆದುಕೊಂಡಿರುವ ಬಗ್ಗೆ ಸಂಸದ ಕೋಟ ಗಮನ ಹರಿಸಿದರು. ಸರಿಯಾದ ದಾಖಲೆಗಳಿಲ್ಲದ ಕಾರಣ ಹಲವಾರು ಪ್ರದೇಶಗಳಲ್ಲಿ ನಷ್ಟವಾಗಿದ್ದರೂ ‘ಬೆಳೆ ನಷ್ಟ ಇಲ್ಲ’ ಎಂಬ ಆಕ್ಷೇಪಾರ್ಹ ವರದಿಗಳು ಸಿದ್ಧವಾಗಿವೆ ಎಂದು ಅವರು ವಿಚಾರ ಮಂಡಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ 39,507 ಮಂದಿ ರೈತರು ವಿಮಾ ಪ್ರೀಮಿಯಂ ಪಾವತಿಸಿದ್ದರೂ, ಕೇವಲ 9,000 ಮಂದಿಗಷ್ಟೇ ಪರಿಹಾರ ಮಂಜೂರಾಗಿ, ನೀಡಲಾದ ಮೊತ್ತವೂ ಅತ್ಯಂತ ಕಡಿಮೆಯಾಗಿದೆ. ಕೆಲವರ ಖಾತೆಗೆ ಬಂದ ಪರಿಹಾರವು ಅವರು ಕಟ್ಟಿದ ವಿಮಾ ಪ್ರೀಮಿಯಂಗಿAತಲೂ ಕಡಿಮೆಯಾಗಿದೆ ಎಂಬುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಅನ್ಯಾಯದ ವಿರುದ್ಧ ಜಿಲ್ಲೆದೆಲ್ಲೆಡೆ ರೈತರು ಪ್ರತಿಭಟನೆಯ ಮಾರ್ಗ ಹಿಡಿದಿದ್ದು, ವಿಮಾ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ವ್ಯಕ್ತವಾಗಿದೆ. ವಿಷಯ ಗಂಭೀರತೆ ಮನಗಂಡ ಸಂಸದ ಕೋಟ, ಕೇಂದ್ರ ಸರ್ಕಾರ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಂದ ತುರ್ತು ವರದಿ ಪಡೆದು ವಿಮಾ ವಂಚಿತ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದಾಗಿ ಸಂಸದರು ತಿಳಿಸಿದ್ದಾರೆ.

