

ಕಳಸ ಲೈವ್ ವರದಿ
ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಳೆದ ೩೪ ವರ್ಷಗಳ ಕಾಲ ಮಾರಾಟ ಗುಮಾಸ್ತರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದ ರವಿರಾಜ್ (ರವಿ ಗೌಡ್ರು) ಅವರು ನವೆಂಬರ್ ೩೦ ರಂದು ವಯೋ ಸಹಜ ನಿವೃತ್ತಿ ಪಡೆದಿದ್ದು, ಸಂಘದ ವತಿಯಿಂದ ಅವರಿಗೆ ಸರಳ ಹಾಗೂ ಭಾವನಾತ್ಮಕ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಳಸ ಭಾಗದ ಜನತೆಗೆ ಕೇವಲ ಗುಮಾಸ್ತರಾಗಿರದೇ ಸೊಸೈಟಿ ರವಿ ಗೌಡ್ರು ಎಂದೇ ಪ್ರೀತಿಯಿಂದ ನೆನಪಿಸಿಕೊಳ್ಳುವಷ್ಟು ಚಿರಪರಿಚಿತರಾಗಿದ್ದ ರವಿರಾಜ್ ಅವರು, ಗ್ರಾಮೀಣ ಪ್ರದೇಶದ ಜನಸಾಮಾನ್ಯರೊಂದಿಗೆ ಅತ್ಯುತ್ತಮ ಬಾಂಧವ್ಯವನ್ನು ಇಟ್ಟುಕೊಂಡು, ಯಾರೊಂದಿಗೂ ನಿಷ್ಟೂರ ಮಾಡಿಕೊಳ್ಳದೆ, ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡಿ ತಮ್ಮ ಸುದೀರ್ಘ ಸೇವೆಯನ್ನು ಪೂರ್ಣಗೊಳಿಸಿದ್ದಾರೆ.
ನಿವೃತ್ತಿ ಸಂದರ್ಭದಲ್ಲಿ ನಡೆದ ಸರಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಜಿ.ಕೆ. ಮಂಜಪ್ಪಯ್ಯ ಅವರು ಮಾತನಾಡಿ, “ಕಳೆದ ೩೪ ವರ್ಷಗಳಲ್ಲಿ ರವಿರಾಜ್ ಅವರು ತಮ್ಮ ಕರ್ತವ್ಯದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಬಾರದಂತೆ ಕೆಲಸ ಮಾಡಿದ್ದಾರೆ. ಅವರ ಈ ಕರ್ತವ್ಯ ನಿಷ್ಠೆ ಮತ್ತು ನಿಸ್ವಾರ್ಥ ಸೇವೆ ಯುವ ಪೀಳಿಗೆಗೆ ಮತ್ತು ಸಂಘದ ಸಿಬ್ಬಂದಿಗೆ ನಿಜವಾದ ಮಾದರಿಯಾಗಿದೆ. ನಿವೃತ್ತಿ ಅನಿವಾರ್ಯವಾದರೂ, ಇವರ ಮುಂದಿನ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹೇಳಿದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ನಿವೃತ್ತ ರವಿ ಗೌಡ್ರು ಈ ಸಂಸ್ಥೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ಎಲ್ಲರಿಗೂ ವಂದನೆಗಳು. ವಿಶೇಷವಾಗಿ, ಸೊಸೈಟಿಗೆ ಬರುವ ಗ್ರಾಹಕರೆಲ್ಲರೂ ನನ್ನೊಂದಿಗೆ ಯಾವಾಗಲೂ ಒಳ್ಳೆಯ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ನನ್ನೊಂದಿಗೆ ಯಾರೂ ಕೂಡ ದುಡುಕು ಮಾತನಾಡದೆ ಉತ್ತಮವಾಗಿ ಸ್ಪಂದಿಸಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ಮತ್ತು ಸಹಕಾರಕ್ಕೆ ನಾನು ಸದಾ ಆಭಾರಿಯಾಗಿದ್ದೇನೆ” ಎಂದು ಭಾವನಾತ್ಮಕವಾಗಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಸಂಘದ ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು ಮತ್ತು ಸ್ಥಳೀಯ ಹಿರಿಯ ಗ್ರಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ರವಿರಾಜ್ ಅವರಿಗೆ ಶುಭ ಕೋರಿದರು.
ಈ ಬೀಳ್ಕೊಡುಗೆ ಕಳಸ ಭಾಗದಲ್ಲಿ ೩ ದಶಕಗಳ ಕಾಲ ನಡೆದ ಒಂದು ಪ್ರಾಮಾಣಿಕ ಸಂಬAಧದ ಮುಕ್ತಾಯ ಮತ್ತು ಹೊಸ ಜೀವನದ ಆರಂಭದ ಸೂಚಕವಾಗಿತ್ತು.


