ಕಳಸ ಲೈವ್ ವರದಿ
(ಸುದೀಶ್ ಸುವರ್ಣ)
ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯ ಶಿಕ್ಷಣ ಇಲಾಖೆಯ ಗಂಭೀರ ನಿರ್ಲಕ್ಷ್ಯ ಮತ್ತು ಮೌಲ್ಯಮಾಪನ ವ್ಯವಸ್ಥೆಯ ಲೋಪ ಬಯಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಮೊದಲ ಫಲಿತಾಂಶದಲ್ಲಿ ಅನುತ್ತೀರ್ಣರಾಗಿದ್ದ ಅಥವಾ ತೀರಾ ಕಡಿಮೆ ಅಂಕ ಪಡೆದಿದ್ದ ನೂರಾರು ವಿದ್ಯಾರ್ಥಿಗಳು ಮರುಮೌಲ್ಯಮಾಪನ ಬಳಿಕ ಉತ್ತೀರ್ಣರಾಗಿರುವ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಅನುತ್ತೀರ್ಣ ಆದ ಮತ್ತು ಕಡಿಮೆ ಅಂಕ ಬಂದು ವಿದ್ಯಾರ್ಥಿಗಳು ಮರು ಮೌಲ್ಯ ಮಾಪನಕ್ಕೆ ಹಾಕಿದಾಗ ಕೆಲ ವಿದ್ಯಾರ್ಥಿಗಳು ಪಾಸಾದರೆ ಇನ್ನು ಕೆಲವು ವಿದ್ಯಾರ್ಥಿಗಳಿಗೆ 20 ರಿಂದ 25ಕ್ಕೂ ಹೆಚ್ಚು ಅಂಕಗಳು ಹೆಚ್ಚಳವಾಗಿರುವುದು ಸಾಮಾನ್ಯ ತಪ್ಪಲ್ಲ, ಇದು ಸಂಪೂರ್ಣ ಮೌಲ್ಯಮಾಪನ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗಿದೆ. ಒಂದೆರಡು ಅಂಕಗಳ ವ್ಯತ್ಯಾಸ ಸಹಜ. ಆದರೆ 25 ಅಂಕಗಳ ಹೆಚ್ಚಳ ಎಂದರೆ ಮೊದಲ ಮೌಲ್ಯಮಾಪನ ಎಷ್ಟು ನಿರ್ಲಕ್ಷ್ಯದಿಂದ ನಡೆದಿರಬಹುದು? ಸ್ಥಿತಿವಂತ ವಿದ್ಯಾರ್ಥಿಗಳು ಮರು ಮೌಲ್ಯ ಮಾಪನಕ್ಕೆ ಹಾಕಿರಬಹುದು ಆದರೆ ಸರ್ಕಾರಿ ಶಾಲೆಯಲ್ಲಿ ಓದುವ ಮತ್ತು ಬಡವರ ಮಕ್ಕಳಿಗೆ ಮರು ಮೌಲ್ಯಮಾಪನಕ್ಕೆ ಹಾಕಲು ಸಾಧ್ಯವಿರುವುದಿಲ್ಲ.ಇಂತಹ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ದ್ರೋಹ ಬಗೆದಂತೆ ಆಗಲಿಲ್ಲವೇ?.
ಎಸ್ಎಸ್ಎಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಬದುಕಿನ ಮಹತ್ವದ ತಿರುವು. ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳಿಗೆ ಇದು ಮುಂದಿನ ವಿದ್ಯಾಭ್ಯಾಸ, ಉದ್ಯೋಗ ಮತ್ತು ಜೀವನದ ದಿಕ್ಕನ್ನು ನಿರ್ಧರಿಸುವ ಹಂತವಾಗಿದೆ. ಇಂತಹ ಸಂದರ್ಭದಲ್ಲಿ ತಪ್ಪು ಮೌಲ್ಯಮಾಪನದಿಂದ ವಿದ್ಯಾರ್ಥಿಗಳು ಅನುಭವಿಸುವ ನೋವಿಗೆ ಯಾರು ಹೊಣೆ.
ಪರೀಕ್ಷೆಯಲ್ಲಿ ಅನುತ್ತೀರ್ಣ ಎಂಬ ಸುದ್ದಿ ಕೇಳಿದ ಕ್ಷಣದಿಂದಲೇ ಅನೇಕ ವಿದ್ಯಾರ್ಥಿಗಳು ತೀವ್ರ ಖಿನ್ನತೆಗೆ ಒಳಗಾಗುತ್ತಾರೆ. ಕೆಲವರು ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ಸಮಾಜದ ಒತ್ತಡ, ಸಂಬAಧಿಕರ ಪ್ರಶ್ನೆಗಳು, ಸ್ನೇಹಿತರ ನಡುವೆ ಆಗುವ ಅವಮಾನ ಇವೆಲ್ಲವು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರುತ್ತವೆ.ಅತ್ಯಂತ ಆತಂಕಕಾರಿ ವಿಷಯವೆಂದರೆ, ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ದುರಂತ ನಿರ್ಧಾರಕ್ಕೂ ಮುಂದಾಗುವ ಸಾಧ್ಯತೆ ಇದೆ. ನಂತರ ಮರುಮೌಲ್ಯಮಾಪನದಲ್ಲಿ ಅವರು ಪಾಸ್ ಆಗಿದ್ದಾರೆ ಎಂಬುದು ಗೊತ್ತಾದರೂ, ಕಳೆದುಹೋದ ಮಾನಸಿಕ ಶಾಂತಿಯನ್ನು ಅಥವಾ ಜೀವವನ್ನು ಮರಳಿ ತರುವವರು ಯಾರು?
ಮಗುವಿನ ಫಲಿತಾಂಶ ನೋಡಿ ಅನೇಕ ಪೋಷಕರು ಮನೋವ್ಯಥೆಗೆ ಒಳಗಾಗುತ್ತಾರೆ. ನಮ್ಮ ಮಗು ಓದಿಲ್ಲವೇ? ಎಂಬ ಆತಂಕದಿAದ ಆರಂಭವಾಗಿ, ಸಮಾಜದ ಮುಂದೆ ತಲೆತಗ್ಗಿಸುವ ಪರಿಸ್ಥಿತಿ ಎದುರಾಗುತ್ತದೆ.
ಇದಕ್ಕೂ ಮೀರಿಸಿ, ಇಲಾಖೆಯ ತಪ್ಪನ್ನು ಸರಿಪಡಿಸಿಕೊಳ್ಳಲು ಮತ್ತೆ ಮರುಮೌಲ್ಯಮಾಪನ ಶುಲ್ಕ, ಉತ್ತರ ಪತ್ರಿಕೆ ಜೆರಾಕ್ಸ್ ವೆಚ್ಚ ಸೇರಿದಂತೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತಿದೆ. ಬಡ ಕುಟುಂಬಗಳಿಗೆ ಇದು ಆರ್ಥಿಕ ಹೊರೆ ಮಾತ್ರವಲ್ಲ, ಅನ್ಯಾಯವೂ ಹೌದು.
ನೂರಕ್ಕೆ ನೂರು ಫಲಿತಾಂಶಕ್ಕಾಗಿ ವರ್ಷಪೂರ್ತಿ ಶ್ರಮಿಸುವ ಶಾಲೆಗಳಿಗೂ ಇಂತಹ ತಪ್ಪು ಮೌಲ್ಯಮಾಪನ ದೊಡ್ಡ ಹೊಡೆತ ನೀಡುತ್ತಿದೆ. ಆರಂಭಿಕ ಫಲಿತಾಂಶದಲ್ಲಿ ಶಾಲೆಯ ಫಲಿತಾಂಶ ಕುಸಿದಂತೆ ಕಾಣುವುದು, ದಾಖಲಾತಿ ಸಮಯದಲ್ಲಿ ಶಾಲೆಯ ಹೆಸರಿಗೆ ಕಪ್ಪು ಚುಕ್ಕೆ ತರುವಂತಾಗಿದೆ.ವಿದ್ಯಾರ್ಥಿಗಳನ್ನು ಕಷ್ಟಪಟ್ಟು ತರಬೇತಿ ನೀಡಿದ ಶಾಲಾ ಶಿಕ್ಷಕರ ಶ್ರಮವೂ ಇಲಾಖೆ ಮಟ್ಟದ ಬೇಜವಾಬ್ದಾರಿತನದಿಂದ ಮಸುಕಾಗುತ್ತಿದೆ.
25 ಅಂಕಗಳ ವ್ಯತ್ಯಾಸ ಎಂದರೆ ಇದು ಸಣ್ಣ ತಪ್ಪಲ್ಲ. ಮೌಲ್ಯಮಾಪಕರು ಉತ್ತರ ಪತ್ರಿಕೆ ಸರಿಯಾಗಿ ನೋಡಿದರೇ? ವಿದ್ಯಾರ್ಥಿಗಳ ಜೀವನದ ಜೊತೆ ಈ ರೀತಿಯ ನಿರ್ಲಕ್ಷ್ಯ ತೋರಲು ಯಾರಿಗೆ ಅಧಿಕಾರ ಕೊಟ್ಟಿದ್ದಾರೆ? ತಪ್ಪು ಫಲಿತಾಂಶ ನೋಡಿ ಯಾವುದಾದರೂ ವಿದ್ಯಾರ್ಥಿ ಜೀವ ಕಳೆದುಕೊಂಡಿದ್ದರೆ ಅದರ ಹೊಣೆ ಯಾರು ಹೊರುತ್ತಾರೆ? ಸರ್ಕಾರ ಉತ್ತರಿಸಬೇಕಿದೆ ಎಂಬ ಆಕ್ರೋಶ ಕೇಳಿಬರುತ್ತಿದೆ.
ಶಿಕ್ಷಣ ಇಲಾಖೆ ಎಂದರೆ ಮಕ್ಕಳ ಭವಿಷ್ಯ ರೂಪಿಸುವ ಪವಿತ್ರ ಸ್ಥಳವಾಗಬೇಕು, ಆದರೆ ಪ್ರಸ್ತುತ ವ್ಯವಸ್ಥೆಯು ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಈ ಬಾರಿಯ ಮೌಲ್ಯಮಾಪನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಲೋಪ ಎಸಗಿದ ಶಿಕ್ಷಕರನ್ನು ತಕ್ಷಣವೇ ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಮತ್ತು ಶಿಕ್ಷಣ ಸಚಿವರು ಕೇವಲ ಸಮರ್ಥನೆ ಮಾಡಿಕೊಳ್ಳುವುದನ್ನು ಬಿಟ್ಟು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕಾಗಿದೆ.
ಶ್ರೀಕಾಂತ್ ಕೆಳಬಾಗ;ಅಧ್ಯಕ್ಷರು ಕಳಸ ಬಿಜೆಪಿ
ಕಳಸ ತಾಲ್ಲೂಕಿನಲ್ಲಿಯೇ ಹಲವಾರು ವಿದ್ಯಾರ್ಥಿಗಳಿಗೆ ಮೋಸ ಆಗಿದೆ.20ರಿಂದ 25 ಅಂಕಗಳು ವ್ಯತ್ಯಾಸ ಆಗುವುದೆಂದರೆ ಇದು ಶಿಕ್ಷಣ ಇಲಾಖೆಯ ಸಂಪೂರ್ಣ ವೈಫಲ್ಯ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಆಟವಾಡುತ್ತಿದೆ. ಇಲಾಖೆಯ ಬೇಜಾವಬ್ದಾರಿಯಿಂದ ವಿದ್ಯಾರ್ಥಿಗಳು ಏನಾದರೂ ಕೆಟ್ಟ ನಿರ್ದಾರ ತೆಗೆದುಕೊಂಡರೆ ಇದಕ್ಕೆ ಯಾರು ಹೊಣೆ.
