
ಕಳಸ ಲೈವ್ ವರದಿ
ಕೇವಲ ಆಟಕ್ಕಷ್ಟೇ ಸೀಮಿತವಾಗದೆ, ಸಾಮಾಜಿಕ ಕಳಕಳಿಯೊಂದಿಗೆ ಸದಾ ಮುಂಚೂಣಿಯಲ್ಲಿರುವ ವೆಸ್ಟರ್ನ್ ಘಾಟ್ ಹಿರೇಬೈಲ್ ಸಂಘಟನೆಯ ವತಿಯಿಂದ ಇಲ್ಲಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ವೆಸ್ಟರ್ನ್ ಘಾಟ್ ಮಾನ್ಸೂನ್ ಲೀಗ್ ಕ್ರಿಕೆಟ್ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ರೋಮಾಂಚನಕಾರಿ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಮರಸಣಿಗೆ ಫ್ರೆಂಡ್ಸ್ ತಂಡವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಆತಿಥೇಯ ವೆಸ್ಟರ್ನ್ ಘಾಟ್ ಹಿರೇಬೈಲ್ ತಂಡವು ರನ್ನರ್ಸ್ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಕಳೆದ ಮೂರು ದಿನಗಳಿಂದ ಜರುಗಿದ ಈ ಜಿದ್ದಾಜಿದ್ದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 14 ಫ್ರಾಂಚೈಸಿ ತಂಡಗಳು ಭಾಗವಹಿಸಿದ್ದವು. ಅಂತಿಮ ಹಂತದಲ್ಲಿ ಮರಸಣಿಗೆ ಫ್ರೆಂಡ್ಸ್ ಮತ್ತು ವೆಸ್ಟರ್ನ್ ಘಾಟ್ ತಂಡಗಳು ಫೈನಲ್ ಪ್ರವೇಶಿಸಿದ್ದವು. ಅಂತಿಮ ಹಣಾಹಣಿಯಲ್ಲಿ ಮರಸಣಿಗೆ ತಂಡವು ಚಾಣಾಕ್ಷ ಆಟದ ಮೂಲಕ ವಿನ್ನರ್ ಆಗಿ ಹೊರಹೊಮ್ಮಿತು.
ಪಂದ್ಯಾವಳಿಯ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೆಎಸ್ಪಿಎಲ್ ನ ಮಂಗಳೂರು ಪ್ರಾಂಚೈಸಿ ಮುಖ್ಯ ತರಬೇತುದಾರರಾದ ರಮೇಶ್ ಕೆಳಗೂರು, ಕ್ರೀಡಾಪಟುಗಳ ಜೀವನದಲ್ಲಿ ಶಿಸ್ತಿನ ಮಹತ್ವವನ್ನು ಒತ್ತಿ ಹೇಳಿದರು.
ಕ್ರೀಡೆಯಲ್ಲಿ ಕೇವಲ ಕೌಶಲ್ಯವಿದ್ದರೆ ಸಾಲದು, ಶಿಸ್ತು ಮತ್ತು ತಾಳ್ಮೆಯನ್ನು ಮೈಗೂಡಿಸಿಕೊಳ್ಳುವುದು ಅತಿ ಮುಖ್ಯ. ಆಗ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ದೀರ್ಘಕಾಲ ಮುಂದುವರಿಯಲು ಸಾಧ್ಯ. ನಮ್ಮ ಮಲೆನಾಡು ಭಾಗದಲ್ಲಿ ಅಪಾರ ಪ್ರತಿಭೆಯುಳ್ಳ ಕ್ರಿಕೆಟ್ ಆಟಗಾರರಿದ್ದಾರೆ. ಇವರೆಲ್ಲರೂ ಮುಂದಿನ ದಿನಗಳಲ್ಲಿ ಉತ್ತಮ ತರಬೇತಿಯನ್ನು ಪಡೆದುಕೊಂಡು, ರಾಷ್ಟ್ರ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವಂತಾಗಬೇಕು, ಎಂದು ಅವರು ಆಶಯ ವ್ಯಕ್ತಪಡಿಸಿದರು.
ಮರಸಣಿಗೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ವಿಶ್ವನಾಥ್ ಮಾತನಾಡಿ, ಸಂಘಟಕರ ದೀರ್ಘದೃಷ್ಟಿ ಹಾಗೂ ಸಾಮಾಜಿಕ ಕಾಳಜಿಯನ್ನು ಶ್ಲಾಘಿಸಿದರು.
ವೆಸ್ಟರ್ನ್ ಘಾಟ್ ಹಿರೇಬೈಲ್ ತಂಡವು ಕೇವಲ ಒಂದು ಕ್ರೀಡಾ ತಂಡವಾಗಿ ಉಳಿದಿಲ್ಲ. ಸಮಾಜದ ಬಗ್ಗೆ ಅಪಾರ ಕಳಕಳಿ ಇಟ್ಟುಕೊಂಡು, ನಿರಂತರವಾಗಿ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಈ ಬಾರಿ ವ್ಯವಸ್ಥಿತವಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಕ್ರೀಡಾ ರಂಗದಲ್ಲೂ ತನ್ನ ಬದ್ಧತೆಯನ್ನು ಸಾಬೀತುಪಡಿಸಿದೆ. ಕೇವಲ ಆಟಕ್ಕಷ್ಟೇ ಸೀಮಿತವಾಗದೆ, ಸಾಮಾಜಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಈ ತಂಡದ ದೀರ್ಘ ಚಿಂತನೆಗೆ ಸಾಕ್ಷಿ. ಇವರ ಕಾರ್ಯಗಳು ನಿಜಕ್ಕೂ ಅಭಿನಂದನಾರ್ಹ,” ಎಂದು ಗುಣಗಾನ ಮಾಡಿದರು.
ಇದೇ ಸಂದರ್ಭದಲ್ಲಿ ಪತ್ರಿಕಾ ಕ್ಷೇತ್ರದಲ್ಲಿ ಸುದೀಶ್ ಸುವರ್ಣ, ವೈದ್ಯಕೀಯ ಕ್ಷೇತ್ರದಲ್ಲಿ ಫೆಲಿಶಾ ಫೆರ್ನಾಂಡಿಸ್, ಉರಗ ತಜ್ಞ ರಿಜ್ವಾನ್ ಇವರನ್ನು ವೆಸ್ಟರ್ನ್ ಘಾಟ್ ಹಿರೇಬೈಲ್ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಿ, ಅಭಿನಂದಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ವೆಸ್ಟರ್ನ್ ಘಾಟ್ ಹಿರೇಬೈಲ್ ತಂಡದ ಅಧ್ಯಕ್ಷ ಮೋಹನ್, ಸ್ಥಳೀಯ ಮುಖಂಡರಾದ ಮಂಜುನಾಥ್ ಹಟ್ಲ, ಫಿಲಿಕ್ಸ್ ಫೆರ್ನಾಂಡೀಸ್, ರಘುನಾಥ್ ಕೋರೆ, ವೆಸ್ಟರ್ನ್ ಘಾಟ್ಸ್ ತಂಡದ ಮೋಹಿತ್ ಮೋನಪ್ಪ, ಸಂತೋಷ್ ಹೊನ್ನಯ್ಯ, ರವಿ ನೇರೆಂಕಿ, ಹರೀಶ್ ಎಡೂರು ಸೇರಿದಂತೆ ಎಲ್ಲಾ ಸದಸ್ಯರು ಇದ್ದರು.
