
ಕಳಸ ಲೈವ್ ವರದಿ
ತಾಲ್ಲೂಕಿನ ಹಿರೇಬೈಲು ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ಮೂರು ದಿನಗಳಿಂದ ತಾಂತ್ರಿಕ ದೋಷ (ಸರ್ವರ್ ಸಮಸ್ಯೆ) ಕಾಣಿಸಿಕೊಂಡಿದ್ದು, ಬಡ ಜನರಿಗೆ ಪಡಿತರ ಸಿಗದೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದ ಉಚಿತ ಅಕ್ಕಿ ನಂಬಿ ಜೀವನ ನಡೆಸುವ ಕೂಲಿ ಕಾರ್ಮಿಕರು ಸದ್ಯ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹಿರೇಬೈಲು ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳ ಜನರೆಲ್ಲರೂ ದಿನಗೂಲಿ ನಂಬಿ ಬದುಕುವವರು. ಒಂದು ದಿನ ಕೆಲಸಕ್ಕೆ ಹೋಗದಿದ್ದರೆ ಆ ದಿನದ ಒಲೆ ಉರಿಯುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ, ಕಳೆದ ಮೂರು ದಿನಗಳಿಂದ ಗ್ರಾಮಸ್ಥರು ತಮ್ಮ ದಿನದ ಕೂಲಿಯನ್ನು ಕಳೆದುಕೊಂಡು ನ್ಯಾಯಬೆಲೆ ಅಂಗಡಿಯ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಬೆಳಗ್ಗೆ 7 ಗಂಟೆಗೇ ಬಂದು ಅಂಗಡಿಯ ಮುಂದೆ ಕುಳಿತುಕೊಳ್ಳುತ್ತಿದ್ದೇವೆ. ಮಧ್ಯಾಹ್ನ ಆದರೂ ಸರ್ವರ್ ಬರುತ್ತಿಲ್ಲ ಎನ್ನುತ್ತಾರೆ. ಕೂಲಿಯೂ ಇಲ್ಲ, ಇತ್ತ ಪಡಿತರವೂ ಇಲ್ಲದೆ ನಮ್ಮ ಹೊಟ್ಟೆಪಾಡು ಹೇಗೆ?” ಎಂದು ಸ್ಥಳೀಯ ಗ್ರಾಮಸ್ಥರೊಬ್ಬರು ತಮ್ಮ ಅಸಹಾಯಕತೆ ಬಿಚ್ಚಿಟ್ಟಿದ್ದಾರೆ.
ಪ್ರಸಕ್ತ ತಿಂಗಳ ಪಡಿತರವನ್ನು ಪಡೆದುಕೊಳ್ಳಲು ಇನ್ನು ಕೇವಲ ಮೂರೇ ದಿನಗಳು ಬಾಕಿ ಇವೆ. ತಿಂಗಳ ಕೊನೆಯೊಳಗೆ ಪಡಿತರ ಸಿಗದಿದ್ದರೆ ಈ ತಿಂಗಳ ಕೋಟಾ ಕೈತಪ್ಪಿಹೋಗುವ ಭೀತಿ ಗ್ರಾಹಕರನ್ನು ಕಾಡುತ್ತಿದೆ. ಬಯೋಮೆಟ್ರಿಕ್ (ಹೆಬ್ಬೆಟ್ಟಿನ ಗುರುತು) ಯಂತ್ರದಲ್ಲಿ ಸರ್ವರ್ ಬ್ಯುಸಿ ಎಂದು ಬರುತ್ತಿರುವುದರಿಂದ ವೃದ್ಧರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಹಸಿವಿನ ಬೇಗೆಯಲ್ಲೇ ದಿನವಿಡೀ ಕಾದು, ಸಂಜೆ ಬರಿಗೈಲಿ ಮನೆಗೆ ಮರಳುತ್ತಿದ್ದಾರೆ.
ಸರ್ಕಾರ ಮತ್ತು ಆಹಾರ ಇಲಾಖೆಯ ತಾಂತ್ರಿಕ ಲೋಪದಿಂದಾಗಿ ಗ್ರಾಹಕರು ಶಿಕ್ಷೆ ಅನುಭವಿಸುವಂತಾಗಿದೆ. ತಿಂಗಳ ಅಂತ್ಯ ಇರುವುದರಿಂದ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ, ಹಿರೇಬೈಲು ಪಡಿತರ ಕೇಂದ್ರದ ಸರ್ವರ್ ಸಮಸ್ಯೆಯನ್ನು ಬಗೆಹರಿಸಬೇಕು. ಅಥವಾ ಪರ್ಯಾಯ ವ್ಯವಸ್ಥೆಯ ಮೂಲಕ ಅರ್ಹ ಫಲಾನುಭವಿಗಳಿಗೆ ಪಡಿತರ ತಲುಪಿಸುವ ಕೆಲಸ ಮಾಡಬೇಕು ಎಂದು ಸಾರ್ವಜನಿಕರು ಆಕ್ರೋಶದೊಂದಿಗೆ ಆಗ್ರಹಿಸಿದ್ದಾರೆ
