ಕಳಸ ಲೈವ್ ವರದಿ
(ಸುದೀಶ್ ಸುವರ್ಣ)
ಸುಡುಸುಡು ಬಿಸಿಲಿಗೆ ಕಳಸದ ಜನ ಬೆಂದು ಹೋಗಿದ್ರೋ ಇಲ್ವೋ ಗೊತ್ತಿಲ್ಲ, ಆದ್ರೆ ಕಳೆದೆರಡು ತಿಂಗಳಿ0ದ ಮನೆಯಲ್ಲಿ ಮಕ್ಕಳ ಆಟ, ತುಂಟಾಟ, ಕಿರುಚಾಟಕ್ಕೆ ಪೋಷಕರು ಮಾತ್ರ ಅಕ್ಷರಶಃ ಬೆಂದು ಬೆಂಡಾಗಿದ್ರು! ಯಾವಾಗಪ್ಪಾ ಈ ಶಾಲೆಗಳು ಬಾಗಿಲು ತೆರೆಯುತ್ತವೋ, ಈ ವಾನರ ಸೈನ್ಯ ಯಾವಾಗ ಸಾಲಿಗೆ ಹೋಗುತ್ತದೋ ಅಂತ ಕಾಯುತ್ತಿದ್ದ ಪೋಷಕರಿಗೆ ಕೊನೆಗೂ ಆ ಶುಭ ಮುಹೂರ್ತ ಬಂದೇ ಬಿಟ್ಟಿದೆ. ಕಳಸದಲ್ಲಿ ಕೆಲವು ಶಾಲೆಗಳು ಈಗಾಗ್ಲೇ ಶುರುವಾಗಿದ್ರೆ, ಇನ್ನು ಕೆಲವು ಆರಂಭದ ಲಕ್ಷಣದಲ್ಲಿವೆ. ಎರಡು ತಿಂಗಳ ಕಾಲ ರಾಜನಂತೆ ಮೆರೆದ ಮಕ್ಕಳು ಈಗ ಮತ್ತೆ ಬೆನ್ನಿಗೆ ಬ್ಯಾಗು ತಗುಲಿಸಿ ಶಾಲೆಯ ಕಡೆ ಹೆಜ್ಜೆ ಇಡುತ್ತಿದ್ದಾರೆ.
ಕಳೆದ ಎರಡು ತಿಂಗಳ ದೃಶ್ಯಾವಳಿಗಳನ್ನೊಮ್ಮೆ ನೆನಪಿಸಿಕೊಂಡರೆ ಅಬ್ಬಬ್ಬಾ… ಮನೆಗಳೇ ಯುದ್ಧಭೂಮಿಯಾಗಿದ್ದವು. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಟಿವಿ ರಿಮೋಟ್ಗಾಗಿ ಜಗಳ, ಮೊಬೈಲ್ಗಾಗಿ ಹಠ, ಮನೆಯಲ್ಲಿದ್ದ ಪಾತ್ರೆ-ಪಗಡಗಳನ್ನೆಲ್ಲಾ ತಬಲ ಮಾಡಿ ಬಾರಿಸುವ ಕಲೆ… ಇವೆಲ್ಲದರಿಂದ ಪೋಷಕರು ಹೈರಾಣಾಗಿದ್ದರು.
ಆದರೆ, ಕಥೆ ಅಷ್ಟಕ್ಕೇ ಮುಗಿಯುವುದಿಲ್ಲ. ಶಾಲೆ ಮೊದಲ ದಿನ ಅಂದ್ರೆ ಅದೊಂದು ದೊಡ್ಡ ಆಪರೇಷನ್ ಇದ್ದಂತೆ. ವರ್ಷ ಪೂರ್ತಿ ಜೋಪಾನವಾಗಿಡಬೇಕಾದ ಶಾಲಾ ವಸ್ತುಗಳನ್ನು ಹುಡುಕುವುದೇ ಒಂದು ಸಾಹಸ. ರೀ… ಆ ಹುಡುಗನ ಹಳೇ ಟೈ ಎಲ್ಲಿದೆ? ನಿನ್ನ ಕರ್ಚಿಫ್ ಎಲ್ಲಿ ಕಳಕೊಂಡೆ? ಬ್ಯಾಗ್ ಜಿಪ್ ಶಾಲೆ ಮುಗಿಯುವ ಮುನ್ನವೇ ಹಾಳಾಗಿತ್ತಾ? ಸ್ಲೇಟ್ ಏನ್ ಮಾಡ್ದೆ, ಛತ್ರಿ ಕಡ್ಡಿ ಮುರಿದು ಹೋಗಿದೆ,ಶರ್ಟ್ ಗುಂಡಿ ಹೋಗಿದ್ದು ಹಾಕ್ಲೇ ಇಲ್ಲ ಎಂಬ ಕಿರುಚಾಟಗಳು ಪ್ರತಿಯೊಂದು ಮನೆಯಲ್ಲೂ ಮಾಮೂಲಿ. ಹೊಸ ಬಟ್ಟೆ, ಹೊಸ ಬ್ಯಾಗು, ಹೊಚ್ಚ ಹೊಸ ಪುಸ್ತಕಗಳ ಗಂಧದ ನಡುವೆ, ಹಳೇ ವಸ್ತುಗಳನ್ನು ಒಟ್ಟುಗೂಡಿಸುವ ಗಡಿಬಿಡಿಯಲ್ಲಿ ಪೋಷಕರ ಹರಸಾಹಸ ನೋಡಲು ಎರಡು ಕಣ್ಣು ಸಾಲದು.
ಇತ್ತ ಮಕ್ಕಳ ಕಡೆಯಿಂದ ನೋಡಿದರೆ ಅದೊಂದು ಬೇರೆಯದೇ ಆದ ಕರುಣಾಜನಕ (ಮತ್ತು ಹಾಸ್ಯಮಯ) ಕಥೆ! ಎರಡು ತಿಂಗಳು ಅಜ್ಜಿ ಮನೆಯಲ್ಲಿ ಮಾವ ಕೊಡ್ಸಿದ ಐಸ್ಕ್ರೀಮ್ ತಿಂದು, ಅತ್ತೆ ಮನೆಯಲ್ಲಿ ಮಾಡಿದ ಗಮ್ಮತ್ತು, ಅಕ್ಕಪಕ್ಕದ ತೋಟಗಳಲ್ಲಿ ಅಲೆದಾಡಿ, ಪ್ರವಾಸ ಮಾಡಿ ಕುಣಿದು ಕುಪ್ಪಳಿಸಿದ್ದ ಮಕ್ಕಳಿಗೆ ಈಗ ಏಕಾಏಕಿ ಬೆಳಗ್ಗೆ ಬೇಗ ಎದ್ದು ಶಾಲೆಗೆ ಹೋಗಬೇಕೆಂದರೆ ಎಲ್ಲಿಲ್ಲದ ಬೇಸರ. ಅಮ್ಮಾ, ಹೊಟ್ಟೆ ನೋವು ಬರ್ತಾ ಇದೆ, ಹೊಟ್ಟೆ ಗುಳು ಗುಳು ಅನ್ತಿದೆ ಇವತ್ತು ಒಂದ್ ದಿನ ಶಾಲೆಗೆ ರಜೆ ಹಾಕ್ತೀನಿ ಎಂಬ ಎಂದಿನ ಪೆದ್ದ ನೆಪಗಳು ಶುರುವಾಗಿವೆ. ಅಜ್ಜಿ ಮನೆಯ, ಅತ್ತೆ ಮನೆಯ ನೆನಪಿನಿಂದ ಹೊರಬರಲಾರದೆ, ಶಾಲೆಗೆ ಹೋಗಲು ಹಿಂದೇಟು ಹಾಕುವ ಮಕ್ಕಳನ್ನು ಇವತ್ತು ಹೋದ್ರೆ ಸಂಜೆ ಬರುವಾಗ ಕುರುಕುರು ತಿಂಡಿ ಕೊಡ್ಸ್ತೀನಿ, ಟೀಚರ್ ಚಾಕಲೇಟ್ ಕೊಡ್ತಾರೆ ಅಂತ ನಾನಾ ರೀತಿಯಲ್ಲಿ ಮನವೊಲಿಸಿ, ಸಮಾಧಾನ ಮಾಡಿ ಶಾಲೆಗೆ ಕಳುಹಿಸುವುದು ಪೋಷಕರಿಗೆ ದೊಡ್ಡ ಸವಾಲೇ ಸರಿ.
ಒಟ್ಟಿನಲ್ಲಿ, ಗ್ರಾಮೀಣ ಭಾಗದ ಪ್ರತಿ ಮನೆಯಲ್ಲೂ ಈಗ ಶಾಲೆ ಹಬ್ಬದ ಸಡಗರ ಮತ್ತು ಗಡಿಬಿಡಿ ಒಟ್ಟೊಟ್ಟಿಗೇ ಮನೆಮಾಡಿದೆ. ಮಕ್ಕಳ ಮುನಿಸು, ಪೋಷಕರ ನಿಟ್ಟುಸಿರು, ಹೊಸ ಪುಸ್ತಕಗಳ ವಾಸನೆ ಇವೆಲ್ಲದರ ನಡುವೆ ನಮ್ಮ ಗ್ರಾಮೀಣ ಭಾಗದ ಜ್ಞಾನದ ದೇಗುಲಗಳು ಮತ್ತೆ ಕಳೆಗಟ್ಟುತ್ತಿವೆ. ಮಕ್ಕಳೇ ರಜೆ ಮುಗಿಯಿತು, ಇನ್ಮೇಲೆ ಓದಿನ ಕಡೆ ಗಮನವಿರಲಿ. ಪೋಷಕರೇ, ನಿಮಗೀಗ ಸ್ವಲ್ಪ ನೆಮ್ಮದಿಯ ದಿನಗಳು.ಎಲ್ಲ ಪುಟಾಣಿಗಳಿಗೆ ಹೊಸ ಶೈಕ್ಷಣಿಕ ವರ್ಷದ ಹಾರ್ದಿಕ ಶುಭಾಶಯಗಳು!
