
ಕಳಸ ಲೈವ್ ವರದಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶೃಂಗೇರಿ ಯೋಜನಾ ಕಚೇರಿಯ ತಾಲೂಕು ಮಟ್ಟದ ‘ಶೌರ್ಯ’ ವಿಪತ್ತು ಕೋರ್ ಕಮಿಟಿ ಸಭೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕಿನ ಯೋಜನಾಧಿಕಾರಿಂ ಸುರೇಶ್, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಕಿಶೋರ್ ಮತ್ತು ನಾಗರಾಜ್ ಅವರು ಜಂಟಿಯಾಗಿ ನೆರವೇರಿಸಿದರು. ತಾಲೂಕು ಯೋಜನಾಧಿಕಾರಿಗಳು ಕಾರ್ಯಕ್ರಮದ ಧ್ಯೇಯೋದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೇಂದ್ರ ಕಚೇರಿಯ ಯೋಜನಾಧಿಕಾರಿ ಕಿಶೋರ್ ಅವರು ಪ್ರಸ್ತುತ ವರ್ಷದ ಶೌರ್ಯ ವಿಪತ್ತು ಕೋರ್ ಕಮಿಟಿಯ ಕ್ಯಾಪ್ಟನ್ ಮತ್ತು ಮಾಸ್ಟರ್ ಆಯ್ಕೆಯ ಬಗ್ಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಬಿ.ಕೆ. ಮಹೇಶ್, ಘಟಕದ ಕ್ಯಾಪ್ಟನ್ ಸಚ್ಚಿದಾನಂದ ಮತ್ತು ತುರ್ತು ಸ್ಪಂದನ ತಂಡದ ಪ್ರತಿನಿಧಿಗಳನ್ನಾಗಿ ಅಜಿತ್ ಮತ್ತು ರಜತ್ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಶೌರ್ಯ ತಂಡದ ಹಿಂದಿನ ವರ್ಷದ ಸೇವೆಗಳ ಬಗ್ಗೆ ವಿಶ್ಲೇಷಣೆ ನಡೆಸಲಾಯಿತು. ಪ್ರಸ್ತುತ ವರ್ಷದಲ್ಲಿ ಕೈಗೊಳ್ಳಬೇಕಾದ ಸಾಮಾಜಿಕ ಸೇವೆ ಮತ್ತು ವಿಪತ್ತು ಘಟಕದ ಸೇವಾ ಕಾರ್ಯಗಳ ಕುರಿತು ಚರ್ಚಿಸಲಾಯಿತು. ಇನ್ನು ಮುಂದೆ ನಿಯಮಿತವಾಗಿ ಮಾಸಿಕ ಸಭೆಗಳನ್ನು ನಡೆಸುವ ಬಗ್ಗೆ ಹಾಗೂ ಸಾಮಾಜಿಕ ಅರಣ್ಯೀಕರಣ ಯೋಜನೆಯಡಿ ವಿವಿಧ ಘಟಕಗಳ ಮೂಲಕ ಹಣ್ಣಿನ ಗಿಡಗಳನ್ನು ನಾಟಿ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಈ ವರ್ಷದ ಅಧಿಕೃತ ಕ್ರಿಯಾಯೋಜನೆ ಪುಸ್ತಕವನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಶೃಂಗೇರಿ ತಾಲೂಕಿನ ಎಲ್ಲಾ ಮೇಲ್ವಿಚಾರಕರು, ಸಿಬ್ಬಂದಿ ವರ್ಗದವರು, ಶೌರ್ಯ ಸಂಯೋಜಕರು ಹಾಗೂ ಶೌರ್ಯ ತಂಡದ ಸದಸ್ಯರು ಉಪಸ್ಥಿತರಿದ್ದರು.
