
ಕಳಸ ಲೈವ್ ವರದಿ
ಕಾರ್ಪೊರೇಟ್ ಕಂಪನಿಗಳು ಕೇವಲ ಅಂಕಗಳನ್ನು ನೋಡುವುದಿಲ್ಲ ಅಭ್ಯರ್ಥಿಯ ದೈಹಿಕ ಹಾಗೂ ಮಾನಸಿಕ ಚುರುಕುತನವನ್ನು ಗಮನಿಸುತ್ತವೆ. ಅದಕ್ಕೆ ಕ್ರೀಡೆ ಅತ್ಯುತ್ತಮ ಅಡಿಪಾಯ ಎಂದು ಆಸ್ಟ್ರೇಲಿಯಾದ ಬಿಎಂಡಬ್ಲ್ಯು ಪ್ರತಿನಿಧಿ ಸಾಗರ್ ಹೇಳಿದರು.
ಇಲ್ಲಿನ ಎಸ್ಡಿಎಂ ಕೈಗಾರಿಕಾ ತರಬೇತಿ ಸಂಸ್ಥೆಯ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿ ನವೀನ್ ಕಳಸ ಮಾತನಾಡಿ ನಾವು ಇದೇ ಸಂಸ್ಥೆಯಲ್ಲಿ ಕಲಿತು ಇಂದು ಉದ್ಯಮಿಗಳಾಗಿ ಬೆಳೆದಿದ್ದೇವೆ. ಕ್ರೀಡೆಯಲ್ಲಿರುವ ಶಿಸ್ತು ಮತ್ತು ಗುರಿ ತಲುಪುವ ಛಲ ವೃತ್ತಿ ಜೀವನಕ್ಕೂ ಅತ್ಯಗತ್ಯ. ಐಟಿಐ ವಿದ್ಯಾರ್ಥಿಗಳು ಕೇವಲ ತಾಂತ್ರಿಕ ಜ್ಞಾನವನ್ನಷ್ಟೇ ಅಲ್ಲದೆ, ಕ್ರೀಡಾ ಮನೋಭಾವವನ್ನು ಬೆಳೆಸಿಕೊಂಡಾಗ ಮಾತ್ರ ಯಶಸ್ವಿ ವೃತ್ತಿಪರರಾಗಲು ಸಾಧ್ಯ ಎಂದು ಹೇಳಿದರು.

ಮಾರುತಿ ಸುಜುಕಿ, ಮಂಗಳೂರು ಸೇಲ್ಸ್ ಎಕ್ಸಿಕ್ಯೂಟಿವ್ ಮ್ಯಾನೇಜರ್ ಪ್ರತ್ಯಕ್ಷ ಮಾತನಾಡಿ ನಮ್ಮ ಮಾತೃಸಂಸ್ಥೆಯ ಮೈದಾನದಲ್ಲಿ ನಾವು ಕಲಿತ ಒಗ್ಗಟ್ಟಿನ ಪಾಠವೇ ಇಂದು ಆಟೋಮೊಬೈಲ್ ಉದ್ಯಮದಲ್ಲಿ ನಮಗೆ ನೆರವಾಗುತ್ತಿದೆ. ತಂಡವಾಗಿ ಕೆಲಸ ಮಾಡುವುದು ಯಶಸ್ಸಿನ ಮೂಲ ಮಂತ್ರವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂ ಐಟಿಐ ಸಂಸೆಯ ಪ್ರಾಂಶುಪಾಲರಾದ ಸತೀಶ್ ವಹಿಸಿ ಮಾತನಾಡಿದ ಅವರು ನಮ್ಮದೇ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಇಂದು ಉದ್ಯಮದ ದಿಗ್ಗಜರಾಗಿ ಬೆಳೆದು, ತಮ್ಮ ಮಾತೃಸಂಸ್ಥೆಗೆ ಮರಳಿ ಕಿರಿಯ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುತ್ತಿರುವುದು ಹಾಗೂ ಉದ್ಯಮದ ಗಣ್ಯರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಅತೀವ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿದ್ದ ಅತಿಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ, ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿ ಶುಭಕೋರಿದರು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ಕರ್ನಾಟಕ ಏಜೆನ್ಸೀಸ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ನವ್ಯ ಸಾಗರ್ ಹಾಗೂ ಎಸ್ಡಿಎಂ ಐಟಿಐ ಸಂಸೆಯ ತರಬೇತಿ ಅಧಿಕಾರಿ ಶ್ರೀ ಗುರುದತ್ ಹಾಗೂ ತರಬೇತು ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
