
ಕಳಸ ಲೈವ್ ವರದಿ
ಕಳಸದ ಶ್ರೀ ಕಲಶೇಶ್ವರ ದೇವಸ್ಥಾನದ ಸಮೀಪದಿಂದ ಕೈಮರದವರೆಗಿನ ಕಾಂಕ್ರೀಟ್ ರಸ್ತೆ ಕಾಮಗಾರಿ ಈಗ ಪಟ್ಟಣದ ಜನತೆಗೆ ಶಾಪವಾಗಿ ಪರಿಣಮಿಸಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಅದಕ್ಷತೆ, ಬೇಜವಾಬ್ದಾರಿತನ ಹಾಗೂ ಆಮೆಗತಿಯ ಕೆಲಸದಿಂದಾಗಿ ಕಳಸ ಪಟ್ಟಣದ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ದಿನನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಕೋಟಿ ಕೋಟಿ ಅನುದಾನ ಬಂದರೂ ಸಮರ್ಪಕ ಯೋಜನೆಯಿಲ್ಲದೆ ಕಾಮಗಾರಿ ನಡೆಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕಲಶೇಶ್ವರ ದೇವಸ್ಥಾನದ ಸಮೀಪ ಶಿಥಿಲಗೊಂಡಿದ್ದ 270 ಮೀಟರ್ ಮುಖ್ಯ ರಸ್ತೆಯ ಅಭಿವೃದ್ಧಿಗೆ 1 ಕೋಟಿ ರೂ. ಭಾರಿ ಅನುದಾನ ಮಂಜೂರಾಗಿತ್ತು. ಈ ಕಾಮಗಾರಿಯನ್ನು ನವಂಬರ್ ತಿಂಗಳಿನಲ್ಲಿ ಪ್ರಾರಂಭ ಮಾಡಲಾಗಿತ್ತು ಆರು ತಿಂಗಳ ಕಾಲ 160 ಮೀ ಕೆಲಸ ಮಾಡಿ ಉಳಿದ ಕಾಮಗಾರಿಯನ್ನು ಅರ್ಧಕ್ಕೆ ಕೈಬಿಡಲಾಗಿತ್ತು. ರಸ್ತೆ ಸಂಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷ ಇದೇ ಭಾನುವಾರ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಎಚ್ಚೆತ್ತುಕೊಂಡ ಇಲಾಖೆ ತರಾತುರಿಯಲ್ಲಿ ಉಳಿಕೆ 110 ಮೀ ರಸ್ತೆ ಮತ್ತು ಬಾಕ್ಸ್ ಚರಂಡಿ ಕಾಮಗಾರಿಗೆ ಕೈಹಾಕಿದೆ.
ಮಳೆಗಾಲ ತಲೆಯ ಮೇಲಿದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ, ಇಡೀ ರಸ್ತೆಯನ್ನು ಅಗೆದು ಹಾಕಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳಲಾಗಿದೆ. ಇದು ಅಧಿಕಾರಿಗಳ ದೂರದೃಷ್ಟಿಯ ಕೊರತೆಯೋ ಅಥವಾ ಕೇವಲ ಕಣ್ಣೊರೆಸುವ ತಂತ್ರವೋ ಎಂಬ ಪ್ರಶ್ನೆ ಮೂಡಿದೆ.

ಈ ಹಿಂದೆ ಕಾಂಕ್ರೀಟ್ ಮಾಡಿದ ಎರಡೂ ಬದಿಯಲ್ಲಿ ಸಮರ್ಪಕವಾಗಿ ಚರಂಡಿ ನಿರ್ಮಾಣ ಮಾಡದ ಕಾರಣ, ಮೇಲ್ಭಾಗದಿಂದ ಹರಿದು ಬರುವ ಮಳೆ ನೀರು ನೇರವಾಗಿ ಕಳಸ ಪಟ್ಟಣದ ಮುಖ್ಯ ರಸ್ತೆಯಲ್ಲೇ ಹರಿಯಲಾರಂಭಿಸಿತ್ತು. ಸಾಲದೆಂಬAತೆ ಇದೀಗ ಹೊಸದಾಗಿ ಅಗೆದಿರುವ ಮಣ್ಣನ್ನು ವಿಲೇವಾರಿ ಮಾಡುವ ಬದಲು, ಕಾಂಕ್ರೀಟ್ ರಸ್ತೆಯ ಅಂಚಿನಲ್ಲಿ ಅತ್ತ ರಸ್ತೆಯೂ ಅಲ್ಲದ ಇತ್ತ ಚರಂಡಿಯೂ ಅಲ್ಲದ ಜಾಗಕ್ಕೆ ತಂದು ಸುರಿಯಲಾಗಿದೆ.
ಇದು ಶುಕ್ರವಾರ ರಾತ್ರಿ ಸುರಿದ ಮಳೆಗೆ ಈ ಮಣ್ಣು ಕಳಸದ ಮುಖ್ಯ ರಸ್ತೆಯುದ್ದಕ್ಕೂ ಕೊಚ್ಚಿಬಂದಿದೆ. ಶನಿವಾರ ಮುಂಜಾನೆ ಇಡೀ ರಸ್ತೆ ಕೆಸರಾಗಿದ್ದರೆ, ಬಿಸಿಲು ಏರುತ್ತಿದ್ದಂತೆ ಇಡೀ ಪಟ್ಟಣ ದೂಳಿನ ಮಯವಾಗಿದೆ.
ರಸ್ತೆ ಪಕ್ಕದ ಅಂಗಡಿ ಮುಂಗಟ್ಟುಗಳು ಹಾಗೂ ಮನೆಗಳ ಒಳಗೆ ದೂಳು ತುಂಬಿಕೊಳ್ಳುತ್ತಿದ್ದು, ವ್ಯಾಪಾರ ವಹಿವಾಟು ಮಾಡಲಾಗದೆ ಬಾಗಿಲು ಹಾಕಿ ಕುಳಿತುಕೊಳ್ಳುವಂತಾಗಿದೆ.
ಈ ಕೆಸರು ಮತ್ತು ದೂಳಿನ ಮಿಶ್ರಣದಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರು ಹಿಡಿಶಾಪ ಹಾಕುತ್ತಿದ್ದಾರೆ. ಪಟ್ಟಣದ ಹಿರಿಯ ನಾಗರಿಕರು ಹಾಗೂ ಶಾಲಾ ಮಕ್ಕಳ ಆರೋಗ್ಯದ ಮೇಲೆ ತೀವ್ರ ತರಹದ ದುಷ್ಪರಿಣಾಮ ಬೀರುತ್ತಿದೆ. ಶ್ವಾಸಕೋಶದ ಸಮಸ್ಯೆ, ಕೆಮ್ಮು, ಅಲರ್ಜಿ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರನ್ನು ಕಂಗಾಲು ಮಾಡಿದೆ.
ಇಷ್ಟೆಲ್ಲಾ ಅವಾಂತರ ಸೃಷ್ಟಿಯಾದರೂ ಸಾಲದೆಂಬ0ತೆ, ಶನಿವಾರವೂ ಸಹ ಅದೇ ಜಾಗಕ್ಕೆ ಮತ್ತಷ್ಟು ಮಣ್ಣು ತಂದು ಸುರಿಯುವ ಮೂಲಕ ಗುತ್ತಿಗೆದಾರರು ಸಾರ್ವಜನಿಕರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿ0ದ ಸಮಸ್ಯೆ ಬೆಟ್ಟದಷ್ಟು ಬೆಳೆದಿದ್ದರೂ, ಸಂಬAಧಪಟ್ಟ ಯಾವುದೇ ಅಧಿಕಾರಿಯಾಗಲಿ ಅಥವಾ ಜನಪ್ರತಿನಿಧಿಯಾಗಲಿ ಚಕಾರವೆತ್ತದೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಿನ ಈ ಅಪವಿತ್ರ ಮೈತ್ರಿ ಗೆ ಸ್ಥಳೀಯರ ಮೌನವೇ ಬಂಡವಾಳವಾಗಿದೆಯೇ? ಎಂಬ ಪ್ರಶ್ನೆ ಈಗ ದಟ್ಟವಾಗಿದೆ. ಈ ಹಿಂದೆ ಕಳಸ ಮುಖ್ಯ ರಸ್ತೆ ಕಾಮಗಾರಿ ನಡೆಯುವಾಗಲೂ ಯಾರದ್ದೋ ಹಿತಾಸಕ್ತಿಗೆ ಮಣಿದು ಸ್ಥಳೀಯರು ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಬೆನ್ನಿಗೆ ನಿಂತಿದ್ದರ ಪ್ರತಿಫಲವನ್ನು ಇಂದು ಇಡೀ ಕಳಸದ ಜನತೆ ಸಮಸ್ಯೆಯನ್ನು ಅನುಭವಿಸುವಂತಾಗಿದೆ.
ಮೂಡಿಗೆರೆ ಶಾಸಕರು ಕ್ಷೇತ್ರ ಹಾಗೂ ಕಳಸ ಪಟ್ಟಣದ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಅನುದಾನವನ್ನು ಕಷ್ಟಪಟ್ಟು ತರುತ್ತಿದ್ದಾರೆ. ಆದರೆ, ಸ್ಥಳೀಯ ಅಧಿಕಾರಿಗಳ ಗುತ್ತಿಗೆದಾರರ ಶಾಮೀಲುತನ, ಸಮರ್ಪಕ ಯೋಜನೆಯಿಲ್ಲದ ಕಾಮಗಾರಿ ಹಾಗೂ ಕಳಪೆ ನಿರ್ವಹಣೆಯಿಂದಾಗಿ ಊರಿನ ಸಮಸ್ಯೆ ಬಗೆಹರಿಯುವ ಬದಲು ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. ಶಾಸಕರು ತಂದ ಅನುದಾನ ಸಾರ್ವಜನಿಕರ ಒಳಿತಿಗೆ ಬಳಕೆಯಾಗುವ ಬದಲು, ಆಡಳಿತ ಪಕ್ಷಕ್ಕೆ ತೀವ್ರ ಮುಜುಗರ ಹಾಗೂ ಕಪ್ಪು ಚುಕ್ಕೆ ತರುವ ಕೆಲಸವನ್ನು ಈ ಬೇಜವಾಬ್ದಾರಿ ವ್ಯವಸ್ಥೆ ಮಾಡುತ್ತಿದೆ.
ಇನ್ನು ಮುಂದಾದರೂ ಸಂಬ0ಧಪಟ್ಟ ಉನ್ನತ ಅಧಿಕಾರಿಗಳು ಹಾಗೂ ಶಾಸಕರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಈ ಬೇಜವಾಬ್ದಾರಿ ಕಾಮಗಾರಿಯನ್ನು ತಡೆದು, ವೈಜ್ಞಾನಿಕವಾಗಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕಿದೆ.
