
ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಕುಟುಂಬಗಳಿಗೆ ಮೂರು ದಶಕಗಳ ಬಳಿಕ ನಿವೇಶನ ಹಂಚಿಕೆ ಮಾಡುವ ಮೂಲಕ ಆಡಳಿತ ಹೊಸ ಆಶಾಕಿರಣ ಮೂಡಿಸಿದೆ.
ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ. 294ರಲ್ಲಿ ಇರುವ 2.35 ಎಕರೆ ಭೂಮಿಯಲ್ಲಿ ಒಟ್ಟು 46 ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ನಿವೇಶನಕ್ಕಾಗಿ ಒಟ್ಟು 73 ಅರ್ಜಿಗಳು ಸಲ್ಲಿಕೆಯಾಗಿದ್ದರೂ ಲಭ್ಯವಿದ್ದ ನಿವೇಶನಗಳ ಸಂಖ್ಯೆ 46 ಮಾತ್ರವಾಗಿದ್ದ ಕಾರಣ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಇತರೆ ಅರ್ಹ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.
ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 30 ವರ್ಷಗಳಿಂದ ಯಾವುದೇ ನಿವೇಶನ ಹಂಚಿಕೆ ನಡೆದಿರಲಿಲ್ಲ. ಪರಿಣಾಮವಾಗಿ ಎಸ್ಟೇಟ್ಗಳ ಲೈನ್ ಮನೆಗಳಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ಹಲವು ದಶಕಗಳಿಂದ ವಾಸಿಸುತ್ತಿದ್ದ ನೂರಾರು ಕಾರ್ಮಿಕ ಕುಟುಂಬಗಳು ಸ್ವಂತ ಸೂರಿನ ಕನಸನ್ನು ಹೊತ್ತು ಬದುಕುತ್ತಿದ್ದರು. ಈ ಕನಸು ನನಸಾಗಬೇಕೆಂದು ಹಲವು ಬಾರಿ ಟೆಂಟ್ ಹಾಕಿ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಆಡಳಿತದ ಗಮನ ಸೆಳೆದಿದ್ದರು.
ಆ ಹೋರಾಟದ ಫಲವಾಗಿ ಇದೀಗ 46 ಕುಟುಂಬಗಳಿಗೆ ನಿವೇಶನ ದೊರೆತಿದ್ದು, ಹಲವು ವರ್ಷಗಳಿಂದ ಸ್ವಂತ ಜಾಗ ಎಂಬ ಕನಸು ಕಂಡಿದ್ದ ಕುಟುಂಬಗಳ ಮುಖದಲ್ಲಿ ಸಂತಸ ಮೂಡಿದೆ. ನಿವೇಶನ ಹಂಚಿಕೆ ಕಾರ್ಯಕ್ರಮದ ವೇಳೆ ಅನೇಕ ಫಲಾನುಭವಿಗಳ ಕಣ್ಣಲ್ಲಿ ಕಂಡ ಸಂತೋಷ ಮತ್ತು ಭವಿಷ್ಯದ ಭರವಸೆ ವಿಶೇಷವಾಗಿತ್ತು. ಅಲ್ಲದೆ ನಿವೇಶನ ಸಿಗದೆ ಇದ್ದ ಫಲಾನುಭವಿಗಳಿಗೆ ನಿರಾಸೆಯೂ ಆಯ್ತು.

ಈ ಕುರಿತು ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದೀಪ್, “46 ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಹಂಚಿಕೆ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಲಾಗಿದ್ದು, ಫಲಾನುಭವಿಗಳ ಸಮ್ಮುಖದಲ್ಲೇ ವಿಡಿಯೋ ಚಿತ್ರೀಕರಣದೊಂದಿಗೆ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಇದರಿಂದ ಯಾವುದೇ ಅನುಮಾನಗಳಿಗೆ ಅವಕಾಶವಿಲ್ಲದಂತೆ ನ್ಯಾಯಯುತ ಕ್ರಮ ಅನುಸರಿಸಲಾಗಿದೆ.
ಯಾರಿಗಾದರೂ ತಕರಾರುಗಳಿದ್ದರೆ ಒಂದು ವಾರದೊಳಗೆ ಅರ್ಜಿ ಸಲ್ಲಿಸಬಹುದು. ಪರಿಶೀಲನೆ ವೇಳೆ ಅನರ್ಹತೆ ಕಂಡುಬAದಲ್ಲಿ ಅಂತಹವರ ನಿವೇಶನ ರದ್ದುಪಡಿಸಿ ಅರ್ಹರಿಗೆ ನೀಡಲಾಗುವುದು. ಫಲಾನುಭವಿಗಳು 15 ದಿನಗಳೊಳಗೆ ಅಗತ್ಯ ದಾಖಲೆಗಳನ್ನು ಪಂಚಾಯಿತಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಇನ್ನೂ ಸುಮಾರು ನಿವೇಶನಗಳ ಅಗತ್ಯತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಇದೇ ಪ್ರದೇಶದಲ್ಲಿ ಹೆಚ್ಚುವರಿಯಾಗಿ 2 ಎಕರೆ ಭೂಮಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ ಉಳಿದ ನಿವೇಶನ ರಹಿತರಿಗೂ ನಿವೇಶನ ನೀಡಲಾಗುತ್ತದೆ ಎಂದು ಪಂಚಾಯಿತಿ ದ್ವಿಧ ಲೆಕ್ಕ ಸಹಾಯಕರಾದ ಆದರ್ಶ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಂಚಾಯಿತಿ ಆಡಳಿತಾಧಿಕಾರಿ ಚೇತನ್, ಅಭಿವೃದ್ಧಿ ಅಧಿಕಾರಿ ವಿಠಲ, ರೆವಿನ್ಯೂ ಇನ್ಸ್ಪೆಕ್ಟರ್ ಲಕ್ಷ್ಮಣ್, ಗ್ರಾಮ ಲೆಕ್ಕಾಧಿಕಾರಿ ಮೆಹಬೂಬ್, ಜಿಲ್ಲಾ ವಸತಿ ನೋಡಲ್ ಅಧಿಕಾರಿ ಜಿತೇಂದ್ರ ಇದ್ದರು.
