
ಕಳಸ ಲೈವ್ ವರದಿ
ಮೈ ಫ್ಯಾಷನ್ ಕಂಪನಿ ವತಿಯಿಂದ ಹೊಸೂರು ನಲ್ಲಿ ಆಯೋಜಿಸಲಾಗಿದ್ದ ಈ ವರ್ಷದ ಅತ್ಯಂತ ದೊಡ್ಡ ಫ್ಯಾಷನ್ ಪ್ರದರ್ಶನ “ದಿ ಬಿಗ್ಗೆಸ್ಟ್ ರನ್ವೇ ಶೋ ಆಫ್ ದಿ ಇಯರ್ – 2026” ಸೀಸನ್-1 ರನ್ವೇ ಮಾಡೆಲಿಂಗ್ ಸ್ಪರ್ಧೆಯು ಇತ್ತೀಚೆಗೆ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಕಳಸ ತಾಲ್ಲೂಕಿನ ಕೆ. ಕೆಳಗೂರಿನ ಸುದೀಪ್ ಗೌಡ ಅವರು ಅದ್ಭುತ ಪ್ರದರ್ಶನ ನೀಡಿ ರನ್ವೇ ಮಾಡೆಲ್ ‘ವಿನ್ನರ್’ ಆಗಿ ಹೊರಹೊಮ್ಮುವ ಮೂಲಕ ಸಾಧನೆ ಮಾಡಿದ್ದಾರೆ.
ಈ ಮೆಗಾ ಫ್ಯಾಷನ್ ಶೋನಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ಪರಿಣಿತ ಹಾಗೂ ಉದಯೋನ್ಮುಖ ಮಾಡೆಲ್ಗಳು ಮತ್ತು ಅಭ್ಯರ್ಥಿಗಳು ಭಾಗವಹಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಅತ್ಯಂತ ಕಠಿಣ ಹಾಗೂ ಸವಾಲಿನಿಂದ ಕೂಡಿದ್ದ ಈ ಸ್ಪರ್ಧೆಯಲ್ಲಿ ತನ್ನ ಆಕರ್ಷಕ ನಡಿಗೆ, ಶೈಲಿ ಮತ್ತು ಕೌಶಲ್ಯದ ಮೂಲಕ ಕಳಸ ತಾಲ್ಲೂಕಿನ ಕೆ. ಕೆಳಗೂರಿನ ಸುದೀಪ್ ಗೌಡ ಅವರು ತೀರ್ಪುಗಾರರ ಮನಗೆದ್ದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಮೈ ಫ್ಯಾಷನ್ ಕಂಪನಿಯು ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಸೀಸನ್-1 ಶೋ ಅನ್ನು ಆಯೋಜಿಸಿತ್ತು. ವಿಜೇತರಾದ ಸುದೀಪ್ ಗೌಡ ಅವರಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಕಿರೀಟ ತೊಡಿಸಿ ಗೌರವಿಸಲಾಯಿತು.
