ಕಳಸ ಲೈವ್ ವರದಿ
ಸಂಸೆ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ನಿವೇಶನ ಹಂಚಿಕೆ ಪ್ರಕ್ರಿಯೆ ವೇಳೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಹಂಚಿಕೆ ಸಂಪೂರ್ಣ ಪಾರದರ್ಶಕವಾಗಿ ನಡೆದಿಲ್ಲ ಎಂದು ಫಲಾನುಭವಿ ಬದ್ರುದ್ದೀನ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಿವೇಶನ ಹಂಚಿಕೆ ಸಭೆಯಲ್ಲೇ ತಕರಾರು ಎತ್ತಿದ ಅವರು, ನಾವು ಹಲವು ವರ್ಷಗಳ ಹಿಂದೆಯೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಎಸ್ಟೇಟ್ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ನೂರಾರು ಕೂಲಿ ಕಾರ್ಮಿಕರು ಹಲವು ವರ್ಷಗಳಿಂದ ನಿವೇಶನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಅಂತಹ ನಿಜವಾದ ನಿವೇಶನ ರಹಿತರನ್ನು ಕಡೆಗಣಿಸಿ, ಹಂಚಿಕೆ ನಡೆದ ದಿನವೇ ಅರ್ಜಿ ಸಲ್ಲಿಸಿದವರಿಗೂ ನಿವೇಶನ ನೀಡಲಾಗಿದೆ ಎಂದು ಆರೋಪಿಸಿದರು.
ಇದಷ್ಟೇ ಅಲ್ಲದೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸದವರಿಗೂ ಹಾಗೂ ಈಗಾಗಲೇ ಸ್ವಂತ ಮನೆ ಹೊಂದಿರುವ ಕೆಲವರಿಗೂ ನಿವೇಶನ ಮಂಜೂರು ಮಾಡಲಾಗಿದೆ ಎಂದು ಅವರು ದೂರಿದರು.
ನಿವೇಶನ ಹಂಚಿಕೆಗೂ ಮುನ್ನ ಪಂಚಾಯಿತಿ ಅಧಿಕಾರಿಗಳು ಪ್ರತಿಯೊಬ್ಬ ಅರ್ಜಿದಾರರ ದಾಖಲಾತಿಗಳನ್ನು ಸಮಗ್ರವಾಗಿ ಪರಿಶೀಲಿಸಬೇಕಿತ್ತು. ಅರ್ಹರನ್ನು ಗುರುತಿಸಿ ಬಳಿಕ ಹಂಚಿಕೆ ಮಾಡಬೇಕಿತ್ತು. ಆದರೆ ಯಾವುದೇ ಪರಿಶೀಲನೆ ನಡೆಸದೆ ಅವಸರದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಬದ್ರುದ್ದೀನ್ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಈ ವಿಚಾರವನ್ನು ಸುಮ್ಮನೆ ಬಿಡುವುದಿಲ್ಲ. ನಿವೇಶನ ಹಂಚಿಕೆಯಲ್ಲಿ ನಡೆದಿರುವ ಲೋಪಗಳ ಕುರಿತು ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸುತ್ತೇನೆ. ಸಂಪೂರ್ಣ ತನಿಖೆ ನಡೆಸಿ ಅನರ್ಹರಿಗೆ ನೀಡಿರುವ ನಿವೇಶನಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದೀಪ್ ಸ್ಪಷ್ಟನೆ ನೀಡಿದ್ದು, “46 ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಹಂಚಿಕೆ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಲಾಗಿದ್ದು, ಫಲಾನುಭವಿಗಳ ಸಮ್ಮುಖದಲ್ಲೇ ವಿಡಿಯೋ ಚಿತ್ರೀಕರಣದೊಂದಿಗೆ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಇದರಿಂದ ಯಾವುದೇ ಅನುಮಾನಗಳಿಗೆ ಅವಕಾಶವಿಲ್ಲದಂತೆ ನ್ಯಾಯಯುತ ಕ್ರಮ ಅನುಸರಿಸಲಾಗಿದೆ.
ಯಾರಿಗಾದರೂ ತಕರಾರುಗಳಿದ್ದರೆ ಒಂದು ವಾರದೊಳಗೆ ಅರ್ಜಿ ಸಲ್ಲಿಸಬಹುದು. ಪರಿಶೀಲನೆ ವೇಳೆ ಅನರ್ಹತೆ ಕಂಡುಬAದಲ್ಲಿ ಅಂತಹವರ ನಿವೇಶನ ರದ್ದುಪಡಿಸಿ ಅರ್ಹರಿಗೆ ನೀಡಲಾಗುವುದು. ಫಲಾನುಭವಿಗಳು 15 ದಿನಗಳೊಳಗೆ ಅಗತ್ಯ ದಾಖಲೆಗಳನ್ನು ಪಂಚಾಯಿತಿಗೆ ಸಲ್ಲಿಸಬೇಕು ಎಂದು ಸ್ಪಷ್ಟಿಕರೀಸಿದರು.
ಸಂಸೆ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 30 ವರ್ಷಗಳ ಬಳಿಕ ನಡೆದ ನಿವೇಶನ ಹಂಚಿಕೆ ಇದೀಗ ಕೆಲ ಫಲಾನುಭವಿಗಳ ಸಂತಸಕ್ಕೆ ಕಾರಣವಾದರೆ, ಮತ್ತೊಂದೆಡೆ ಆಯ್ಕೆ ಪ್ರಕ್ರಿಯೆ ಕುರಿತ ಆರೋಪಗಳಿಂದ ವಿವಾದದ ಕಿಡಿಗೂ ಕಾರಣವಾಗಿದೆ.
