ಕಳಸ ಲೈವ್ ವರದಿ
ಸ್ಥಳೀಯರೊಬ್ಬರು ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ಹೋಗುವ ದಾರಿಗೆ ಬೇಲಿ ಹಾಕಿ ನೀರು ಸರಬರಾಜಿಗೆ ಅಡ್ಡಿಪಡಿಸಿದ ಘಟನೆಯನ್ನು ಖಂಡಿಸಿ, ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋರೆ ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದಿದೆ.
ಕೋರೆ ಮತ್ತು ಹಿರೇಬೈಲು ಗ್ರಾಮಗಳ ವ್ಯಾಪ್ತಿಯ ಸಾರ್ವಜನಿಕರಿಗೆ ಕಳೆದ 60 ವರ್ಷಗಳಿಂದ ಇದೇ ಬಾವಿಯಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಇದು ಗ್ರಾಮಸ್ಥರ ಪಾಲಿನ ಜೀವನಾಡಿಯಾಗಿದೆ. ಆದರೆ, ಇತ್ತೀಚೆಗೆ ಸ್ಥಳೀಯ ವ್ಯಕ್ತಿಯೊಬ್ಬರು ಬಾವಿ ಇರುವ ಜಾಗಕ್ಕೆ ಹೋಗುವ ದಾರಿಗೆ ಅಕ್ರಮವಾಗಿ ಬೇಲಿ ನಿರ್ಮಿಸಿದ್ದಾರೆ.
ಬೇಲಿ ಹಾಕಿದ ಪರಿಣಾಮ ಪಂಚಾಯಿತಿಯ ನೀರುಗಂಟಿಗೆ ಬಾವಿಯ ಬಳಿ ಹೋಗಲು ಸಾಧ್ಯವಾಗದೆ, ಕಳೆದ 10 ದಿನಗಳಿಂದ ಗ್ರಾಮಕ್ಕೆ ಸಂಪೂರ್ಣ ನೀರು ಸರಬರಾಜು ಸ್ಥಗಿತಗೊಂಡಿತ್ತು. ಇದರಿಂದ ಗ್ರಾಮಸ್ಥರು ಹನಿ ನೀರಿಗೂ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಷ ವ್ಯಕ್ತಪಡಿಸಿದರು.
ನೀರಾವರಿ ಸಮಸ್ಯೆಯಿಂದ ಬೇಸತ್ತ ಗ್ರಾಮಸ್ಥರು ಈ ಹಿಂದೆ ಪಂಚಾಯಿತಿಗೆ ಮನವಿ ಸಲ್ಲಿಸಿ ಬೇಲಿ ತೆರವುಗೊಳಿಸುವಂತೆ ಆಗ್ರಹಿಸಿದ್ದರು. ಆದರೆ, ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೋಸಿಹೋದ 50ಕ್ಕೂ ಹೆಚ್ಚು ಗ್ರಾಮಸ್ಥರು ಒಟ್ಟಾಗಿ ಬಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹತ್ತಾರು ವರ್ಷಗಳಿಂದ ಪಂಚಾಯಿತಿಯೇ ನಿರ್ಮಿಸಿ, ನಿರ್ವಹಿಸುತ್ತಿರುವ ಬಾವಿ ಇದು. ಯಾರೋ ಒಬ್ಬರು ಬೇಲಿ ಹಾಕಿದರೆ ಪಂಚಾಯಿತಿ ಮೂಕಪ್ರೇಕ್ಷಕನಾಗಿ ನಿಂತಿರುವುದು ಸರಿಯೇ? ನಮಗೆ ತಕ್ಷಣ ಕುಡಿಯುವ ನೀರು ಕೊಡಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಕಳಸ ಪೊಲೀಸರು ಪಂಚಾಯಿತಿ ಕಚೇರಿಗೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ತದನಂತರ ಪೊಲೀಸ್ ಇಲಾಖೆ, ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಜಂಟಿ ಮಾತುಕತೆ ನಡೆಸಲಾಯಿತು.
ಅಂತಿಮವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ, ಗ್ರಾಮ ಪಂಚಾಯಿತಿಯ ಮುಂದಾಳತ್ವದಲ್ಲೇ ಸ್ಥಳದಲ್ಲಿದ್ದ ಅಕ್ರಮ ಬೇಲಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು. ಇದರೊಂದಿಗೆ ಕಳೆದ ಹತ್ತು ದಿನಗಳಿಂದ ಉದ್ವಿಗ್ನಗೊಂಡಿದ್ದ ನೀರಿನ ಸಮಸ್ಯೆಗೆ ತಾತ್ಕಾಲಿಕ ಸುಖಾಂತ್ಯ ಸಿಕ್ಕಂತಾಗಿದೆ.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಜಗದೀಶ್ ಭಂಡಾರಿ, ಚಂದ್ರು, ಶರೀಪ್, ನಾಗೇಶ, ದಾಮೋದರ, ಜ್ಯೋತಿ, ರವಿ ಸೇರಿದಂತೆ ಹಲವಾರು ಗ್ರಾಮಸ್ಥರು ಪಾಲ್ಗೊಂಡು ಸಾರ್ವಜನಿಕ ಹಕ್ಕಿಗಾಗಿ ಧ್ವನಿ ಎತ್ತಿದರು.
