
ಕಳಸ ಲೈವ್ ವರದಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಭೂ ಮಂಜೂರಾತಿ ಹಗರಣದ ತನಿಖಾ ವರದಿಯನ್ನು ತಕ್ಷಣವೇ ಅಂಗೀಕರಿಸಿ, ಅಕ್ರಮ ಕಡತಗಳನ್ನು ವಜಾಗೊಳಿಸಬೇಕು ಹಾಗೂ ಆ ಜಮೀನನ್ನು ಅರ್ಹ ಭೂಹೀನ ಬಡವರಿಗೆ ಹಂಚಬೇಕು ಎಂದು ‘ಭೂಹೀನ ಬಡವರ ಐಕ್ಯತಾ ಒಕ್ಕೂಟ’ದ ಮುಖಂಡ ಒತ್ತಾಯಿಸಿದ್ದಾರೆ.
ಈ ಬಗ್ಗೆ ಜಿಲ್ಲಾದಿಕರಿಗಳಿಗೆ ಮನವಿ ಸಲ್ಲಿಸಿ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ನಡೆದಿರುವ ವ್ಯಾಪಕ ಅಕ್ರಮ ಭೂ ಮಂಜೂರಾತಿ ಕುರಿತು ಈಗಾಗಲೇ ಕಂದಾಯ ಇಲಾಖೆ, ಲೋಕಾಯುಕ್ತ, ಭೂ ಕಬಳಿಕೆ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯಗಳಲ್ಲಿ ತನಿಖೆ ನಡೆಯುತ್ತಿದೆ. ಸರ್ಕಾರವೇ ನೇಮಿಸಿರುವ ತನಿಖಾ ತಂಡವು ಈಗಾಗಲೇ ಸತ್ಯಾಸತ್ಯತೆಗಳಿಂದ ಕೂಡಿದ ವರದಿಯನ್ನು ಸಲ್ಲಿಸಿದ್ದು, ಇದನ್ನು ಶೀಘ್ರವೇ ಜಾರಿಗೊಳಿಸಬೇಕು.
ಮೂಡಿಗೆರೆ ತಾಲೂಕಿನಲ್ಲಿ ಇತ್ತೀಚಿನ ವಿಧಾನಸಭಾ ಅಧಿವೇಶನದ ಮಾಹಿತಿ ಪ್ರಕಾರ 30,572 ಎಕರೆ ಸರ್ಕಾರಿ ಜಮೀನಿದೆ. ಇದರಲ್ಲಿ 10,785 ಎಕರೆ ಸರ್ಕಾರಿ ಭೂಮಿ ಅಕ್ರಮ ಮಂಜೂರಾತಿಯಲ್ಲಿದೆ. ಮೂಡಿಗೆರೆ ಮತ್ತು ಕಳಸ ತಾಲೂಕಿನಲ್ಲಿ ಅಧಿಕೃತವಾಗಿ 10,000ಕ್ಕೂ ಹೆಚ್ಚು ಹಾಗೂ ಅನಧಿಕೃತವಾಗಿ 20,000ಕ್ಕೂ ಹೆಚ್ಚು ನಿವೇಶನರಹಿತರು ನೋಂದಾಯಿಸಿಕೊAಡಿದ್ದಾರೆ.ಇಷ್ಟೊAದು ದೊಡ್ಡ ಪ್ರಮಾಣದಲ್ಲಿ ಬಡವರು ನಿವೇಶನ, ಸ್ಮಶಾನ ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದರೂ, ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಕೈಜೋಡಿಸಿ ಅಕ್ರಮ ಎಸಗುತ್ತಿದ್ದಾರೆ.
ಹೊರದೇಶ, ಹೊರರಾಜ್ಯ ಹಾಗೂ ಹೊರಜಿಲ್ಲೆಯ ಪ್ರಭಾವಿ ವ್ಯಕ್ತಿಗಳಿಗೆ ಸ್ಥಳೀಯ ಗ್ರಾಮಗಳ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ.ಸ್ಥಳೀಯ ಪಂಚಾಯಿತಿಗಳು ಬಡವರಿಗಾಗಿ ಕಾಯ್ದಿರಿಸಿದ್ದ ಜಮೀನನ್ನು ನಿಯಮ ಬಾಹಿರವಾಗಿ ಇತರರಿಗೆ ನೀಡಲಾಗಿದೆ.ದಲಿತರಿಗೆ ದರ್ಖಾಸ್ತು ಮೂಲಕ ಮಂಜೂರಾಗಿದ್ದ ಜಮೀನನ್ನು ತಾಲೂಕು ಕಚೇರಿಯಿಂದ ಮೂಲ ಕಡತಗಳನ್ನೇ ಕದ್ದು, ಫಾರಂ ನಂ. 53ರ ಅಡಿಯಲ್ಲಿ ಬೇರೆಯವರಿಗೆ ಮಂಜೂರು ಮಾಡಲಾಗಿದೆ.ಮಕ್ಕಳ ಜನನಕ್ಕಿಂತ ಮುಂಚಿತವಾಗಿ ಅಥವಾ 18 ವರ್ಷ ತುಂಬುವ ಮುನ್ನವೇ ಅರ್ಜಿ ಸಲ್ಲಿಸಿದಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಯಾವುದೇ ಅರ್ಜಿ ಸಲ್ಲಿಸದಿದ್ದರೂ ನೇರವಾಗಿ ಖಾತೆ ಮಾಡಿಕೊಡಲಾಗಿದ್ದು, ನೂರಾರು ಎಕರೆ ಬೇನಾಮಿ ಆಸ್ತಿ ಹೊಂದಲಾಗಿದೆ.ಸರ್ಕಾರಿ ಶಾಲೆ, ಆಸ್ಪತ್ರೆ, ಕೆರೆ, ಸ್ಮಶಾನ ಹಾಗೂ ಇನಾಂ ಭೂಮಿಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಒಕ್ಕೂಟದ ಪ್ರಮುಖ ಬೇಡಿಕೆಗಳು:
ಭ್ರಷ್ಟ ಅಧಿಕಾರಿಗಳು ಮತ್ತು ದಲ್ಲಾಳಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮ ಮಂಜೂರಾತಿಯ ಕಡತಗಳನ್ನು ಸಂಪೂರ್ಣವಾಗಿ ವಜಾಗೊಳಿಸಿ, ಆ ಭೂಮಿಯನ್ನು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ಪತ್ರೆ, ಶಾಲೆ, ಅಂಬೇಡ್ಕರ್ ಭವನ, ಆಟದ ಮೈದಾನ ಹಾಗೂ ಸರ್ಕಾರಿ ನೌಕರರ ವಸತಿಗೃಹಗಳ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು. ಉಳಿದ ಜಮೀನನ್ನು ನಿವೇಶನರಹಿತ ಬಡವರಿಗೆ ಹಂಚಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡರಾದ ಶಿವಪ್ರಸಾದ್ ಭಾರತೀಬೈಲ್, ಕೆ.ಕೆ.ಕೃಷ್ಣಪ್ಪ ಬಿಳಗುಳ. ಜಗದೀಶ್ ಚಕ್ರವರ್ತಿ, ಸಂತೋಷ್ ಕಮ್ಮರಗೂಡು, ಹರೀಶ್ ಕೆಲ್ಲೂರು, ರಾಜೇಶ್ ಕಮ್ಮರಗೂಡು, ಉಮೇಶ್ ಘಟ್ಟದಹಳ್ಳಿ, ಚಂದ್ರು ದೇವರಮಕ್ಕಿ ಶೇಖರ್ ಜಿ.ಹೊಸಳ್ಳಿ ಇದ್ದರು.
