ಕಳಸ ಲೈವ್ ವರದಿ
ಇಲ್ಲಿಯ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ವತಿಯಿಂದ ವಿಶ್ವ ಯೋಗ ದಿನಾಚರಣೆ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಹಾಗೂ ಸುನೀತ್ಯಾ ಟ್ರಸ್ಟ್ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಪಿಯುಸಿ ಮತ್ತು ಪ್ರಥಮ ದರ್ಜೆಯ ಅತ್ಯಂತ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ಸುನೀತ್ಯಾ ಟ್ರಸ್ಟ್ ಮುಖ್ಯಸ್ಥೆ ಶ್ರೀಮತಿ ಸುನಿತಾ ಶೆಣೈ, ವಿದ್ಯಾರ್ಥಿವೇತನ ಎಂಬುದು ಕೇವಲ ಆರ್ಥಿಕ ಸಹಾಯವಲ್ಲ, ಅದು ನಿಮ್ಮ ಮೇಲಿಟ್ಟಿರುವ ಭರವಸೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಗೆ ಸೀಮಿತವಾಗದೆ, ಜ್ಞಾನಾರ್ಜನೆಗಾಗಿ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ಕಷ್ಟಕಾಲದಲ್ಲಿ ನಮಗೆ ಸಿಕ್ಕ ಈ ಸಹಾಯವನ್ನು ನೆನಪಿನಲ್ಲಿಟ್ಟುಕೊಂಡು, ಭವಿಷ್ಯದಲ್ಲಿ ನಾವು ಉತ್ತಮ ಸ್ಥಿತಿಗೆ ತಲುಪಿದಾಗ ಸಮಾಜದ ಋಣವನ್ನು ತೀರಿಸಬೇಕು. ನಮ್ಮ ಗಳಿಕೆಯ ಒಂದು ಭಾಗವನ್ನು ನಮ್ಮಂತೆಯೇ ಕಷ್ಟದಲ್ಲಿರುವ ಮತ್ತೊಬ್ಬ ವಿದ್ಯಾರ್ಥಿಯ ಶಿಕ್ಷಣಕ್ಕೆ ನೀಡುವ ಮೂಲಕ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಾವು ದೇಶದ ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಕಿರಣ್ ಬ್ರಹ್ಮದೇವ್ ಅವರು, ನಮ್ಮ ಮಹಿಳಾ ಮಂಡಳಿಯು ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಇಂದು ವಿಶ್ವ ಯೋಗ ದಿನದ ಅಂಗವಾಗಿ ಯೋಗಾಭ್ಯಾಸದ ಮಹತ್ವವನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಅತ್ಯಗತ್ಯ. ವಿದ್ಯಾರ್ಥಿಗಳು ಮತ್ತು ಮಹಿಳೆಯರು ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಇದರೊಂದಿಗೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮಂಡಳಿಯ ಜೊತೆಗೂಡಿ ನೆರವಾಗುತ್ತಿರುವ ಸುನೀತ್ಯಾ ಟ್ರಸ್ಟ್ನ ಕಾರ್ಯ ಶ್ಲಾಘನೀಯ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಮಂಡಳಿಯ ಪ್ರಮುಖರಾದ ಶ್ರೀಮತಿ ಚಂಪಾ ರಾವ್, ಶ್ರೀಮತಿ ಸುಲತ, ಶಿಕ್ಷಕಿ ಶ್ರೀಮತಿ ರಶ್ಮಿ ಇತರರು ಇದ್ದರು.
