ಕಳಸ ಲೈವ್ ವರದಿ
ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ‘ನಕ್ಷತ್ರ ಉದ್ಯಾನವನ’ವನ್ನು ಸೋಮವಾರ ಉದ್ಘಾಟಿಸಲಾಯಿತು.
ಕಾಲೇಜಿನ ಆವರಣದಲ್ಲಿ ಉದ್ಯಾನವನಕ್ಕಾಗಿ ಮೀಸಲಿರಿಸಲಾಗಿದ್ದ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗಿದೆ. ಪಶುಸಂಗೋಪನಾ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಡಾ. ಜಾನಕಿ ಸುಂದರೇಶ್ ಅವರ ಪರಿಕಲ್ಪನೆಯಂತೆ ಈ ಯೋಜನೆ ರೂಪುಗೊಂಡಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ರಾಜೇಂದ್ರ ಹೆಬ್ಬಾರ್ ಹಿತ್ತಲಮಕ್ಕಿ ಅವರು, ಡಾ. ಜಾನಕಿ ಸುಂದರೇಶ್ ಅವರ ವಿನೂತನ ಹಾಗೂ ವೈಜ್ಞಾನಿಕ ಪರಿಕಲ್ಪನೆಯು ಪರಿಸರ ಸಂರಕ್ಷಣೆ ಮತ್ತು ಜನಜಾಗೃತಿಗೆ ಪೂರಕವಾಗಿದ್ದು, ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ಉದ್ಯಾನವನವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕಾಲೇಜು ಅಭಿವೃದ್ಧಿ ಸಮಿತಿಯು ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಉದ್ಯಾನವನದ ಪರಿಕಲ್ಪನೆ ಕುರಿತು ಮಾತನಾಡಿದ ಡಾ. ಜಾನಕಿ ಸುಂದರೇಶ್, ಔಷಧೀಯ ಗುಣಗಳನ್ನು ಹೊಂದಿರುವ ಹಾಗೂ ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳುವ 27 ನಕ್ಷತ್ರಗಳಿಗೆ ಅನುಗುಣವಾಗಿ 27 ಜಾತಿಯ ಸಸಿಗಳನ್ನು ಉದ್ಯಾನವನದಲ್ಲಿ ನೆಡಲಾಗಿದೆ ಎಂದು ತಿಳಿಸಿದರು. ಈ ಮರಗಳು ಬೆಳೆಯುವುದರಿಂದ ನೆರಳು ಹಾಗೂ ಪರಿಸರ ಸಮತೋಲನಕ್ಕೆ ನೆರವಾಗುವುದರ ಜೊತೆಗೆ, ಆಯಾ ನಕ್ಷತ್ರದ ವ್ಯಕ್ತಿಗಳು ತಮ್ಮ ನಕ್ಷತ್ರಕ್ಕೆ ಸಂಬAಧಿಸಿದ ಮರದ ನೆರಳಿನಲ್ಲಿ ಕಾಲ ಕಳೆಯುವುದರಿಂದ ಮಾನಸಿಕ ಹಾಗೂ ದೈಹಿಕ ನೆಮ್ಮದಿ ದೊರೆಯುತ್ತದೆ ಎಂಬುದು ಭಾರತೀಯ ಪ್ರಾಚೀನ ಶಾಸ್ತ್ರಗಳ ನಂಬಿಕೆಯಾಗಿದೆ ಎಂದರು. ಸ್ಥಳೀಯರು ಹಾಗೂ ವಿದ್ಯಾರ್ಥಿಗಳಲ್ಲಿ ಪ್ರಕೃತಿ ಮತ್ತು ಪರಿಸರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ ಮಾತನಾಡಿ, ಡಾ. ಜಾನಕಿ ಸುಂದರೇಶ್ ಅವರ ಪ್ರಸ್ತಾವನೆಗೆ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ರಾಜೇಂದ್ರ ಹೆಬ್ಬಾರ್ ತಕ್ಷಣವೇ ಒಪ್ಪಿಗೆ ನೀಡಿ ಅಗತ್ಯ ಸಹಕಾರ ನೀಡಿದ್ದರಿಂದ ಉದ್ಯಾನವನವನ್ನು ವೈಜ್ಞಾನಿಕವಾಗಿ ರೂಪಿಸಲು ಸಾಧ್ಯವಾಯಿತು ಎಂದು ಹೇಳಿದರು.
ಕಾಲೇಜಿನ ಯೋಗ ಶಿಕ್ಷಕರಾದ ಪ್ರೇಮ್ ಕುಮಾರ್, ಅರಣ್ಯ ಇಲಾಖೆಯ ಡಿಆರ್ಎಫ್ಒ ಹರೀಶ್,ಕಸಾಪ ಅಧ್ಯಕ್ಷ ಸತೀಶ್ಚಂದ್ರ, ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಕಿರಣ ಬ್ರಹ್ಮದೇವ, ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಅಜಿತ್ ಪ್ರಸಾದ್, ಕಸಾಪ ಮಹಿಳಾ ಘಟಕ ಜಿಲ್ಲಾ ಸಂಚಾಲಕಿ, ಮಮ್ತಾಜ್ ಬೇಗಮ್, ಲೇಖಕೀಯರ ಸಂಘದ ಅಧ್ಯಕ್ಷೆ ಗೀತಾ ಮಕ್ಕಿಮನೆ ಇತರರು ಇದ್ದರು.
