ಕಳಸ ಲೈವ್ ವರದಿ
ಸಂವಿಧಾನಬದ್ಧವಾಗಿ ದೇಶದ ನಾಗರಿಕರು ಹೊಂದಿರುವ ಮತದಾನದ ಹಕ್ಕನ್ನು ಕಸಿದುಕೊಳ್ಳುವ ದುಷ್ಟ ಕೆಲಸಕ್ಕೆ ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು APCR (ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್) ರಾಜ್ಯ ಸಮಿತಿ ಮುಖಂಡರಾದ ಮಹಮ್ಮದ್ ಪೀರ್ ಆರೋಪಿಸಿದರು.
ಕಳಸದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಹೂಡಿಕೆ ವಲಯ ಕುರಿತಾದ ಮಾಹಿತಿ ಶಿಬಿರ ಹಾಗೂ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಪರಮೋಚ್ಚ ಹಕ್ಕಾಗಿದೆ. ಈ ಹಕ್ಕನ್ನು ಯಾವ ರೀತಿಯಲ್ಲಿ ರಕ್ಷಿಸಿಕೊಳ್ಳಬೇಕು ಮತ್ತು ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ನಾಗರಿಕರು ಜಾಗೃತರಾಗಬೇಕಿದೆ ಎಂದು ಮಹಮ್ಮದ್ ಪೀರ್ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಸಮೀವುಲ್ಲ ಮಾತನಾಡಿ ಮತದಾನ ಈ ದೇಶದ ಪ್ರತಿಯೊಬ್ಬ ನಾಗರಿಕನ ಜನ್ಮಸಿದ್ಧ ಹಕ್ಕು. ಯಾವುದೇ ಕಾರಣಕ್ಕೂ ನಮ್ಮ ಹಕ್ಕುಗಳನ್ನು ಇನ್ನೊಬ್ಬರ ಸ್ವಾರ್ಥಕ್ಕಾಗಿ, ಅವರ ಅಧಿಕಾರದ ಲಾಲಾಸೆಗಾಗಿ ಕಿತ್ತುಕೊಳ್ಳಲು ಬಿಡಬಾರದು. ಜನಾಂದೋಲನದ ಈ ಹೋರಾಟ ಕೇವಲ ಕಳಸಕ್ಕೆ ಮಾತ್ರ ಸೀಮಿತವಾಗದೆ, ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಸಿಗುವವರೆಗೂ APCR ತನ್ನ ಹೋರಾಟವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಮುಂದುವರಿಸಲಿದೆ. ಇದೇ ವಿಷಯಕ್ಕೆ ಸಂಬ0ಧಿಸಿದ0ತೆ ಈಗಾಗಲೇ ಮಾನ್ಯ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿದೆ ಎಂದು ಅವರು ತಿಳಿಸಿದರು.
APCR ಜಿಲ್ಲಾ ಸಮಿತಿ ಮುಖಂಡರಾದ ನದೀಮ್ ಖಾನ್ ಮಾತನಾಡಿ, ನಮ್ಮದು ಜಾತ್ಯಾತೀತ ರಾಷ್ಟ್ರ. ಇಲ್ಲಿ ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ಪ್ರಜಾಪ್ರಭುತ್ವದ ಹಾದಿಯಲ್ಲಿ ಬದುಕು ಸಾಗಿಸುವ ನಾವೆಲ್ಲರೂ ಒಂದೇ. ನಮ್ಮ ಹಕ್ಕುಗಳನ್ನು ಹತ್ತಿಕ್ಕುವ ಯಾವುದೇ ವ್ಯವಸ್ಥೆ ಬಂದರೂ ಅದರ ವಿರುದ್ಧ ಹೋರಾಟ ನಡೆಯಲೇಬೇಕು. ಮತದಾನದ ಹಕ್ಕು ನಮಗೆ ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನಬದ್ಧ ಹಕ್ಕಾಗಿದೆ ಎಂದು ಹೇಳಿದರು.
ಶಿಬಿರದ ವೇದಿಕೆಯಲ್ಲಿ APCR ಜಿಲ್ಲಾ ಕಾರ್ಯದರ್ಶಿ ಲಿಂಗಪ್ಪ ಜಿ., ಸಮಿತಿಯ ಪ್ರಮುಖ ಸದಸ್ಯರುಗಳಾದ ಗೋಪಾಲ, ಶ್ರೀನಿವಾಸ್, ಸತೀಶ್, ಮತ್ತು ಸಂಸೆಯ ತನ್ವೀರ್ ಸೇರಿದಂತೆ ಹಲವು ಮುಖಂಡರು ಹಾಗೂ ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.
