
ಕಳಸ ಲೈವ್ ವರದಿ
ಕಳಸದಲ್ಲಿ ಮೂರು ದಿನಗಳ ಕಾಲ ನಡೆದ ಹಲಸು ಮೇಳದಲ್ಲಿ ಹಲಸು ಮೇಳದ ಆಯೋಜಕರನ್ನು ಕರ್ನಾಟಕ ಜಾನಪದ ಪರಿಷತ್ ಗೌರವಿಸಿತು.
ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ರಜಿತ್ ಕೆಳಗೂರು ಮಾತನಾಡಿ ಹಲಸು ಎಂಬುದು ಕೇವಲ ಒಂದು ಹಣ್ಣಲ್ಲ, ಅದು ಒಂದು ಕಾಲದಲ್ಲಿ ಜನರ ಹಸಿವು ನೀಗಿಸುವ ಪ್ರಮುಖ ಆಹಾರ ಪದ್ಧತಿಯಾಗಿತ್ತು. ಆದರೆ ಕಾಲಕ್ರಮೇಣ ಇಂದಿನ ಯುವ ಪೀಳಿಗೆಗೆ ಹಲಸಿನ ಆರೋಗ್ಯಕರ ಅಂಶಗಳನ್ನು ಕೇವಲ ಪಠ್ಯಪುಸ್ತಕಗಳ ಮೂಲಕ ನೋಡಿ ಕಲಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ. ಮಲೆನಾಡಿನಲ್ಲಿ ಪ್ರತಿ ವರ್ಷ ಅಪಾರ ಪ್ರಮಾಣದ ಹಲಸಿನ ಹಣ್ಣುಗಳು ಸೂಕ್ತ ಬಳಕೆಯಾಗದೆ ಕೊಳೆತು ಹಾಳಾಗುತ್ತಿವೆ. ಈ ಮೇಳ ಮತ್ತು ಕಾರ್ಯಗಾರದ ಮೂಲಕ ವಿವಿಧ ಹಲಸಿನ ತಳಿಗಳನ್ನು ಪರಿಚಯಿಸುವುದರೊಂದಿಗೆ, ಹಾಳಾಗುವ ಹಲಸಿನಿಂದ ಏನೆಲ್ಲಾ ಬಗೆಯ ವೈವಿಧ್ಯಮಯ ಹಾಗೂ ರುಚಿಕರ ಖಾದ್ಯಗಳನ್ನು ತಯಾರಿಸಬಹುದು ಎಂಬುದನ್ನು ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಹಲಸಿಗೆ ಇನ್ನಷ್ಟು ಸೂಕ್ತ ಮಾನ್ಯತೆ ದೊರಕುವುದರೊಂದಿಗೆ, ನಮ್ಮ ಸಾಂಪ್ರದಾಯಿಕ ಜಾನಪದ ಆಹಾರ ಪದ್ಧತಿ ಉಳಿಯಬೇಕು ಎಂಬುದೇ ಜಾನಪದ ಪರಿಷತ್ತಿನ ಮುಖ್ಯ ಆಶಯವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಂಚಾಲಕಿ ಮಮ್ತಾಜ್ ಬೇಗಂ, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಸುಮಾನ ಜಾಯರಾಜ್, ವಕೀಲರಾದ ಮಾಲಾತಿ ರಾವ್, ಕಜಾಪ ಸದಸ್ಯರಾದ ಆಶಾ ರಾಘವೇಂದ್ರ ಐತಳ್, ಪೂರ್ಣಿಮ ಪ್ರಮೋದ್, ಪೂರ್ಣಚಂದ್ರ ಹೆಬ್ಬಾರ್, ಗಣೇಶ್, ಉದಯ್, ಶಮೀರ್ ಇತರರು ಇದ್ದರು.
