ಕಳಸ ಲೈವ್ ವರದಿ
(ಆಶಾ ಸುವರ್ಣ ಕಳಸ)
ಶಿಕ್ಷಣ ಇಲಾಖೆಯು ಶನಿವಾರದ ಶಾಲಾ ಸಮಯವನ್ನು ಬೆಳಿಗ್ಗೆ 8:30ಕ್ಕೆ ನಿಗದಿಪಡಿಸಿ ಹೊರಡಿಸಿರುವ ಆದೇಶವು ಮಲೆನಾಡಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ನಗರ ಪ್ರದೇಶ ಹಾಗೂ ಬಯಲುಸೀಮೆಯ ಸಾರಿಗೆ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಕಣ್ಣಮುಂದಿಟ್ಟುಕೊAಡು ರೂಪಿಸಿದ ಈ ನಿಯಮ, ಪಶ್ಚಿಮ ಘಟ್ಟದ ತಪ್ಪಲಿನ ಕಳಸ ತಾಲ್ಲೂಕಿನಂತಹ ದುರ್ಗಮ ಮಲೆನಾಡು ಪ್ರದೇಶದ ವಿದ್ಯಾರ್ಥಿಗಳನ್ನು ಶನಿವಾರದ ತರಗತಿಗಳಿಂದ ವಂಚಿತರಾಗುವAತೆ ಮಾಡಿದೆ.
ಶಿಕ್ಷಣ ಇಲಾಖೆಯ ಪ್ರಸ್ತುತ ನಿಯಮಾವಳಿಗಳ ಪ್ರಕಾರ ಶಾಲಾ ಅವಧಿಯ ವಿವರ ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 10:00 ರಿಂದ ಸಾಯಂಕಾಲ 4:15 ರವರೆಗೆ. ಶನಿವಾರದ ಸಮಯ ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 12:50 ರವರೆಗೆ.
ಸರ್ಕಾರದ ಲೆಕ್ಕಾಚಾರದ ಪ್ರಕಾರ ವಾರದ ಒಟ್ಟು ಬೋಧನಾ ಗಂಟೆಗಳನ್ನು ಸರಿದೂಗಿಸಲು ಶನಿವಾರ ಬೆಳಿಗ್ಗೆಯೇ ಶಾಲೆ ಆರಂಭಿಸುವುದು ಅನಿವಾರ್ಯ ಇರಬಹುದು. ಆದರೆ, ಈ 8:30ರ ಗಡುವು ಕಳಸದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ವಯಿಸುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ.
ಕಳಸ ಪಟ್ಟಣದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಆಶ್ರಯಿಸಿರುವ ಗ್ರಾಮೀಣ ಮಕ್ಕಳ ದಿನಚರಿಯನ್ನು ಗಮನಿಸಿದರೆ ಇಲಾಖೆಯ ಆದೇಶದ ಹಿಂದಿರುವ ಅವಾಸ್ತವಿಕತೆ ಎದ್ದು ಕಾಣುತ್ತದೆ. ಕಳಕೋಡು, ಕಾರ್ಲೆ, ಇಡಕಣಿ, ಮುಜೆಖಾನು, ಬಲಿಗೆ, ಎಸ್.ಕೆ.ಮೇಗಲ್, ಕೋಟೆಮಕ್ಕಿ, ಸಂಸೆ, ಜಾಂಬ್ಲೆ, ನೆಲ್ಲಿಬೀಡು, ಬಾಳೆಹೊಳೆ, ಕಗ್ಗನಳ್ಳ, ತನೂಡಿ, ಗಾಳಿಗಂಡಿ, ಗುತ್ಯಡ್ಕ, ಮುಂತಾದ ಹಳ್ಳಿಗಳಿಂದ ವಿದ್ಯಾರ್ಥಿಗಳು ಕಳಸ ಪಟ್ಟಣಕ್ಕೆ ಬರಲು ಕನಿಷ್ಠ 15 ರಿಂದ 20 ಕಿಲೋಮೀಟರ್ ಕ್ರಮಿಸಬೇಕು.ಈ ಹಳ್ಳಿಗಳ ಒಳ ರಸ್ತೆಗಳಿಂದ ಮುಖ್ಯ ರಸ್ತೆಗೆ ಬರಲು ವಿದ್ಯಾರ್ಥಿಗಳು ನಿತ್ಯ 3 ರಿಂದ 4 ಕಿ.ಮೀ ಕಾಲ್ನಡಿಗೆಯಲ್ಲೇ ಸಾಗಬೇಕು.
ಸಾಮಾನ್ಯ ದಿನಗಳಲ್ಲಿ 9.30 ಗಂಟೆಗೆ ಶಾಲೆಗೆ ತಲುಪಲು ಮಕ್ಕಳು ಬೆಳಿಗ್ಗೆ 6:30ಕ್ಕೆ ಮನೆ ಬಿಡುತ್ತಾರೆ. ಆದರೆ, ಶನಿವಾರ 8:30ಕ್ಕೆ ಶಾಲೆಗೆ ಹಾಜರಾಗಬೇಕಾದರೆ ಮಕ್ಕಳು ಬೆಳಿಗ್ಗೆ 5:30ಕ್ಕೇ ಮನೆಯಿಂದ ಹೊರಡಬೇಕಾದ ಪರಿಸ್ಥಿತಿ ಇದೆ.
ಮಲೆನಾಡಿನ ಗ್ರಾಮೀಣ ಭಾಗಗಳಲ್ಲಿ ಬೆಳಿಗ್ಗೆ 6:00 ಅಥವಾ 6:30ರ ಸುಮಾರಿಗೆ ಯಾವುದೇ ಸರ್ಕಾರಿ ಅಥವಾ ಖಾಸಗಿ ಬಸ್ಸುಗಳ ಸೌಲಭ್ಯವಿರುವುದಿಲ್ಲ. ಸಾರಿಗೆ ವ್ಯವಸ್ಥೆಯೇ ಇಲ್ಲದಿರುವಾಗ ಮಕ್ಕಳು ಶಾಲೆಗೆ ತಲುಪುವುದು ಹೇಗೆ?
ಈ ಪ್ರಾಯೋಗಿಕ ತೊಂದರೆಗಳಿoದಾಗಿ ಶನಿವಾರದ ದಿನಗಳಲ್ಲಿ ಕಳಸದ ಶಾಲೆಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಶೇ. 40 ರಿಂದ 50 ರಷ್ಟು ಕುಸಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇದು ಮಕ್ಕಳ ಶೈಕ್ಷಣಿಕ ಪ್ರಗತಿಯ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ.
ಮಲೆನಾಡಿನಲ್ಲಿ ಮುಂಜಾನೆ 5:30 ಎಂದರೆ ದಟ್ಟ ಕತ್ತಲು ಮತ್ತು ಮಂಜು ಕವಿದ ವಾತಾವರಣವಿರುತ್ತದೆ. ಇತ್ತೀಚಿನ ದಿನಗಳಲ್ಲಿ ಆನೆ, ಚಿರತೆ, ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಇಂತಹ ಸಮಯದಲ್ಲಿ ಮಕ್ಕಳು ಕಾಲು ಹಾದಿಯಲ್ಲಿ ನಡೆದುಕೊಂಡು ಬರುವುದು ಪ್ರಾಣಕ್ಕೆ ಅಪಾಯ ತಂದೊಡ್ಡುವ0ತಿದೆ.ಮು0ಜಾನೆ ಐದು ಗಂಟೆಗೆ ಎದ್ದು, ಉಪಾಹಾರವೂ ಇಲ್ಲದೆ ಖಾಲಿ ಹೊಟ್ಟೆಯಲ್ಲಿ ಕಿಲೋಮೀಟರ್ಗಟ್ಟಲೆ ನಡೆದು ಬರುವ ವಿದ್ಯಾರ್ಥಿಗಳಲ್ಲಿ ದಣಿವು ಮತ್ತು ಅಪೌಷ್ಟಿಕತೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮುಂಜಾನೆಯ ಕತ್ತಲಿನಲ್ಲಿ ಬಿಕೋ ಎನ್ನುವ ರಸ್ತೆಗಳಲ್ಲಿ ಹೆಣ್ಣು ಮಕ್ಕಳು ನಡೆದುಕೊಂಡು ಬರುವುದು ಪೋಷಕರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಇದೇ ಕಾರಣಕ್ಕೆ ಹಲವರು ಶನಿವಾರ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ.
ಮಲೆನಾಡಿನ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕೇವಲ ಒಂದೇ ನಿಯಮವನ್ನು ಇಡೀ ರಾಜ್ಯಕ್ಕೆ ಹೇರದೆ, ಪ್ರಾದೇಶಿಕ ಬದಲಾವಣೆಗಳನ್ನು ಮಾಡಿಕೊಳ್ಳಲು ಮುಕ್ತ ಅವಕಾಶ ನೀಡಬೇಕಿದೆ.
ಶನಿವಾರ ಬೆಳಿಗ್ಗೆ 8:30ರ ಬದಲಿಗೆ 9:30 ರಿಂದ ಮಧ್ಯಾಹ್ನ 1:30 ರವರೆಗೆ ತರಗತಿಗಳನ್ನು ನಡೆಸಬಹುದು. ಇದರಿಂದ ಗ್ರಾಮೀಣ ಮಕ್ಕಳು ಬೆಳಿಗ್ಗೆ 7:30ಕ್ಕೆ ಮನೆಯಿಂದ ಹೊರಟರೂ ಸರಿಯಾದ ಸಮಯಕ್ಕೆ ಶಾಲೆಗೆ ತಲುಪಲು ಸಾಧ್ಯವಾಗುತ್ತದೆ ಮತ್ತು ನಿಯಮಿತ ಬಸ್ ಸೌಕರ್ಯಗಳನ್ನೂ ಬಳಸಿಕೊಳ್ಳಬಹುದು.
ನಗರೀಕರಣದ ಚೌಕಟ್ಟಿನಲ್ಲಿ ಕುಳಿತು ನಿಯಮಗಳನ್ನು ರೂಪಿಸುವ ಐಎಎಸ್ ಅಧಿಕಾರಿಗಳು ಮತ್ತು ಸರ್ಕಾರ, ಮಲೆನಾಡಿನ ಬೆಟ್ಟ-ಗುಡ್ಡ, ಕಾಲುದಾರಿಗಳ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮಲೆನಾಡಿನ ಗ್ರಾಮೀಣ ಮಕ್ಕಳೂ ಸಮಾನ ಶಿಕ್ಷಣ ಪಡೆಯಬೇಕಾದರೆ, ಶನಿವಾರದ ಶಾಲಾ ಸಮಯವನ್ನು ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ಬದಲಾಯಿಸಿಕೊಳ್ಳಲು ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಪ್ರಾಂಶುಪಾಲರಿಗೆ ಮುಕ್ತ ಅಧಿಕಾರ ನೀಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಸಚಿವರು ತಕ್ಷಣವೇ ಗಮನಹರಿಸಬೇಕಾಗಿದೆ.
