ಕಳಸ ಲೈವ್ ವರದಿ
ಮಳೆಗಾಲದ ಆರಂಭವೆ0ದರೆ ಮಳೆನಾಡಿನ ಜನರಿಗೆ ಪ್ರಕೃತಿಯ ಸೌಂದರ್ಯದ ಜೊತೆಗೆ ಅನಿವಾರ್ಯ ಕಷ್ಟಗಳ ಸರಮಾಲೆಯೂ ಹೌದು. ಕಳಸ ತಾಲ್ಲೂಕಿನಾಧ್ಯಂತ ಮುಂಗಾರು ಮಳೆ ಚುರುಕಾಗುತ್ತಿದ್ದಂತೆ, ಇಲ್ಲಿನ ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸುವುದು ವಿದ್ಯುತ್ ಸಮಸ್ಯೆ. ದಟ್ಟ ಕಾನನ, ಎತ್ತರದ ಬೆಟ್ಟ-ಗುಡ್ಡಗಳು ಮತ್ತು ಕಣ್ಣು ಹಾಯಿಸಿದಷ್ಟೂ ಕಾಣುವ ಬೃಹತ್ ಮರಗಳೇ ತುಂಬಿರುವ ಈ ಪ್ರದೇಶದಲ್ಲಿ, ಒಂದು ಸಣ್ಣ ಬಿರುಗಾಳಿ ಬೀಸಿದರೂ ಸಾಕು, ದೈತ್ಯ ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿ ಬೀಳುತ್ತವೆ. ಪರಿಣಾಮ, ಇಡೀ ಕಳಸ ತಾಲ್ಲೂಕು ಕತ್ತಲಲ್ಲಿ ಮುಳುಗುತ್ತದೆ.
ಬೆಟ್ಟದಷ್ಟು ಸಮಸ್ಯೆಗೆ ಬೆರಳೆಣಿಕೆಯಷ್ಟು ಸಿಬ್ಬಂದಿ: ಇದು ಮೆಸ್ಕಾಂ ನೌಕರರ ಕಣ್ಣೀರ ಕಥೆ
ಕಳಸ ಭಾಗದಲ್ಲಿ ಹರಿದು ಹಂಚಿಹೋಗಿರುವ ವಿದ್ಯುತ್ ಮಾರ್ಗಗಳನ್ನು ಸರಿಪಡಿಸುವುದು ಸಾಮಾನ್ಯ ಕೆಲಸವಲ್ಲ. ಆದರೆ, ಇಲ್ಲಿ ಕಾಡುತ್ತಿರುವ ಅತಿ ದೊಡ್ಡ ದುರಂತವೆ0ದರೆ ಸಿಬ್ಬಂದಿಗಳ ತೀವ್ರ ಕೊರತೆ. ಬೆಟ್ಟದಷ್ಟು ಸಮಸ್ಯೆಗಳಿರುವ ಈ ಭಾಗದಲ್ಲಿ ಕೆಲಸ ಮಾಡುತ್ತಿರುವುದು ಕೇವಲ ಬೆರಳೆಣಿಕೆಯಷ್ಟು ನೌಕರರು ಮಾತ್ರ! ಕತ್ತಲಲ್ಲಿ ಮುಳುಗಿದ ಹಳ್ಳಿಗಳಿಗೆ ಬೆಳಕು ನೀಡಲು ಈ ನೌಕರರು ಹಗಲು-ರಾತ್ರಿ ಎನ್ನದೆ, ಊಟ-ತಿಂಡಿ ಮರೆತು ದುಡಿಯುತ್ತಿದ್ದಾರೆ.
ಮಳೆಯಲ್ಲಿ ನೆನೆಯುತ್ತಾ, ಜೀವವನ್ನು ಕೈಯಲ್ಲಿ ಹಿಡಿದು, ಜಿಗಣೆ ಕಡಿತದ ನಡುವೆಯೂ ಕಡಿದಾದ ಹಳ್ಳ-ಕೊಳ್ಳಗಳನ್ನು ದಾಟಿ ವಿದ್ಯುತ್ ಲೈನ್ಗಳನ್ನು ಸರಿಪಡಿಸುವ ಇವರ ಕಾಯಕ ನಿಜಕ್ಕೂ ಶ್ಲಾಘನೀಯ. ಇಲಾಖೆಯ ಮೇಲಾಧಿಕಾರಿಗಳ ಒತ್ತಡ ಒಂದೆಡೆಯಾದರೆ, ಸಾರ್ವಜನಿಕರ ಆಕ್ರೋಶಕ್ಕೆ ಮುಖಾಮುಖಿಯಾಗಬೇಕಾದ ಅನಿವಾರ್ಯತೆ ಇವರದ್ದು. ಕೇವಲ ಬೆರಳೆಣಿಕೆಯಷ್ಟು ಸಿಬ್ಬಂದಿಯನ್ನು ಇಟ್ಟುಕೊಂಡು ಇಡೀ ತಾಲ್ಲೂಕಿನ ಮಳೆಗಾಲದ ವಿದ್ಯುತ್ ವ್ಯವಸ್ಥೆಯನ್ನು ನಿರ್ವಹಿಸುವುದು ಅಸಾಧ್ಯದ ಮಾತು. ಆದರೂ, ತಮ್ಮ ವೈಯಕ್ತಿಕ ಬದುಕನ್ನು ಬದಿಗೊತ್ತಿ ಇವರು ಮಾಡುತ್ತಿರುವ ಸೇವೆ ಶ್ಲಾಘನೀಯ.
ಇಲಾಖೆಯ ಸುತ್ತೋಲೆಯಂತೆ ಕಳಸ ಸಬ್ ಡಿವಿಜನ್ ನಲ್ಲಿ 16 ಸಿಬ್ಬಂದಿಗಳು ಇರಬೇಕಾಗಿದ್ದು, 8 ಜನ ಮಾತ್ರ ನೌಕರರು ಇದ್ದಾರೆ.
ಕಳಸ ಸೆಕ್ಷನ್ 1 ರಲ್ಲಿ 30 ಜನ ಸಿಬ್ಬಂದಿಗಳ ಪೈಕಿ 14 ಜನ ಕೆಲ ಮಾಡುತ್ತಿದ್ದಾರೆ.ಕಳಸ ಸೆಕ್ಷನ್ 2 ರಲ್ಲಿ 28ರ ಪೈಕಿ 10 ಜನ ಕೆಲಸ ಮಾಡುತ್ತಿದ್ದಾರೆ.ಬಾಳೂರು ಸೆಕ್ಷನ್ ನಲ್ಲಿ 28 ಸಿಬ್ಬಂದಿಗಳ ಪೈಕಿ 15 ಜನ ಕೆಲಸ ಮಾಡುತ್ತಿದ್ದಾರೆ.ಒಟ್ಟಾರೆಯಾಗಿ 102 ಜನ ಕೆಲಸ ಮಾಡಬೇಕಾದ ಸ್ಥಳದಲ್ಲಿ ಕೇವಲ 47 ಮಂದಿ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, 55 ಸಿಬ್ಬಂದಿಗಳ ಕೊರತೆ ಇದೆ.
ವರ್ಗಾವಣೆಯಾದರೂ ಜಾಯಿನ್ ಆಗದ ಜೆಇ: ಇಲಾಖೆಯ ಉದಾಸೀನತೆಗೆ ಸಾಕ್ಷಿ!
ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಕಳಸ ಮೆಸ್ಕಾಂ ಇಲಾಖೆಯಲ್ಲಿ ಖಾಲಿ ಇರುವ ಜೂನಿಯರ್ ಇಂಜಿನಿಯರ್ ಹುದ್ದೆಗೆ ಮೂಡಬಿದ್ರೆಯಿಂದ ಮೋಹನ್ ಎಂಬುವವರನ್ನು ಇತ್ತೀಚೆಗೆ ಕಳಸಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಅತ್ಯಂತ ತುರ್ತು ಪರಿಸ್ಥಿತಿ ಇರುವ ಈ ಮಳೆಗಾಲದ ಸಂದರ್ಭದಲ್ಲಿ, ವರ್ಗಾವಣೆಯಾಗಿ ಹತ್ತು ದಿನಗಳೇ ಕಳೆದಿದ್ದರೂ ಅಧಿಕಾರಿ ಮಾತ್ರ ಇಲಾಖೆಗೆ ಬಂದು ಡ್ಯೂಟಿಗೆ ಜಾಯಿನ್ ಆಗಿಲ್ಲ!
ತುರ್ತು ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರಬೇಕಾದ ಅಧಿಕಾರಿಗಳೇ ಈ ರೀತಿ ನಿರ್ಲಕ್ಷ್ಯ ವಹಿಸಿದರೆ ಹೇಗೆ? ಇಲ್ಲಿನ ನೌಕರರು ಸಿಬ್ಬಂದಿ ಕೊರತೆಯಿಂದ ಕಣ್ಣೀರು ಹಾಕುತ್ತಿದ್ದರೆ, ವರ್ಗಾವಣೆಯಾದ ಅಧಿಕಾರಿಗಳು ಬಾರದೆ ಇರುವುದು ಇಲಾಖೆಯ ಉದಾಸೀನತೆ ಹಾಗೂ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ತೀಕ್ಷ್ಣ ಕ್ರಮ ಕೈಗೊಳ್ಳಬೇಕಿದೆ.
ಮಳೆಗಾಲ ಬರುತ್ತದೆ ಎನ್ನುವುದು ಇಲಾಖೆಗೆ ಮುಂಚಿತವಾಗಿಯೇ ತಿಳಿದಿರುತ್ತದೆ. ಮಳೆನಾಡಿನ ಭೌಗೋಳಿಕ ಪರಿಸ್ಥಿತಿಯ ಅರಿವೂ ಇಲಾಖೆಗೆ ಇದೆ. ಆದರೂ, ಮುಂಜಾಗ್ರತಾ ಕ್ರಮವಾಗಿ ಮಳೆಗಾಲದ ಅವಧಿಗಾದರೂ ಇಲ್ಲಿಗೆ ‘ಹೆಚ್ಚುವರಿ ಸಿಬ್ಬಂದಿ’ಗಳನ್ನು ನೇಮಕ ಮಾಡಲು ಮೆಸ್ಕಾಂ ಇಲಾಖೆ ಏಕೆ ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದೆ.
ಕೇವಲ ಕಾಗದದ ಮೇಲೆ ಯೋಜನೆಗಳನ್ನು ರೂಪಿಸುವ ಇಲಾಖೆ, ತಳಮಟ್ಟದಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರು ಮತ್ತು ಲೈನ್ಮ್ಯಾನ್ಗಳ ಸುರಕ್ಷತೆ ಹಾಗೂ ಕೆಲಸದ ಒತ್ತಡವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಮಳೆಗಾಲದ ಈ ನಾಲ್ಕೈದು ತಿಂಗಳುಗಳ ಕಾಲ ತಾತ್ಕಾಲಿಕವಾಗಿಯಾದರೂ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿದರೆ, ಸಾರ್ವಜನಿಕರಿಗೂ ತೊಂದರೆಯಾಗುವುದಿಲ್ಲ ಮತ್ತು ಸದ್ಯ ಇರುವ ಸಿಬ್ಬಂದಿಗಳ ಮೇಲಿನ ಮಾನಸಿಕ ಹಾಗೂ ದೈಹಿಕ ಒತ್ತಡವೂ ಕಡಿಮೆಯಾಗುತ್ತದೆ.
ಕಳಸ ತಾಲ್ಲೂಕಿನ ಜನರಿಗೆ ಕತ್ತಲೆಯಿಂದ ಮುಕ್ತಿ ಸಿಗಬೇಕಾದರೆ ಮತ್ತು ಹಗಲು-ರಾತ್ರಿ ದುಡಿಯುತ್ತಿರುವ ಮೆಸ್ಕಾಂ ಸಿಬ್ಬಂದಿಗೆ ನ್ಯಾಯ ಸಿಗಬೇಕಾದರೆ, ಉನ್ನತ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ವರ್ಗಾವಣೆಯಾಗಿಯೂ ಕರ್ತವ್ಯಕ್ಕೆ ಬಾರದ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಿ, ತಕ್ಷಣವೇ ಕಳಸಕ್ಕೆ ಹೆಚ್ಚುವರಿ ಸಿಬ್ಬಂದಿ ಹಾಗೂ ಅಗತ್ಯ ಪರಿಕರಗಳನ್ನು ಒದಗಿಸಬೇಕಿದೆ.
