
ಕಳಸ ಲೈವ್ ವರದಿ
ಪಶ್ಚಿಮ ಘಟ್ಟಗಳ ಪ್ರಮುಖ ಆಕರ್ಷಣೆಗಳಲ್ಲೊಂದಾದ ನೇತ್ರಾವತಿ ಪೀಕ್ ಚಾರಣವನ್ನು ಜುಲೈ 9 ಮತ್ತು 10ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್ ಒಂದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರಕಟಣೆಯಲ್ಲಿ ತುಂಬಿರುವ ಸಾಲು ಸಾಲು ಭಾಷಾ ದೋಷಗಳು ಕನ್ನಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಇದು ಅರಣ್ಯ ಇಲಾಖೆಯ ಅಧಿಕೃತ ಪ್ರಕಟಣೆಯೋ ಅಥವಾ ಖಾಸಗಿ ವ್ಯಕ್ತಿಗಳ ಕೈವಾಡವೋ ಎಂಬ ಗೊಂದಲ ಸೃಷ್ಟಿಯಾಗಿದೆ.
ಒಂದು ವೇಳೆ ಈ ಪೋಸ್ಟರ್ನ್ನು ಅರಣ್ಯ ಇಲಾಖೆಯೇ ಅಧಿಕೃತವಾಗಿ ಬಿಡುಗಡೆ ಮಾಡಿದ್ದೇ ಆದಲ್ಲಿ, ಇದು ಇಲಾಖೆಯ ಬೇಜವಾಬ್ದಾರಿತನ ಹಾಗೂ ಮಾತೃಭಾಷೆಗೆ ಮಾಡಿದ ಘೋರ ಅಪಮಾನ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅರ್ಥವೇ ಇಲ್ಲದ ಸಾಕಷ್ಟು ಅಕ್ಷರಗಳನ್ನು ಜೋಡಿಸಲಾಗಿದೆ.

ವಾಕ್ಯರಚನೆಯಲ್ಲಿ ಕನಿಷ್ಠ ಜ್ಞಾನವೂ ಇಲ್ಲದಂತೆ ಪದಗಳನ್ನು ಜೋಡಿಸಲಾಗಿದೆ. ಇಡೀ ಪೋಸ್ಟರ್ನಲ್ಲಿ ಸಾಲು ಸಾಲು ತಪ್ಪುಗಳು ತುಂಬಿ ತುಳುಕುತ್ತಿವೆ.ಮೋಲ್ನೋಟಕ್ಕೆ ಇದು ಎಐ ಮುಖಾಂತರ ಸೃಷ್ಟಿಸಿದ ಪೋಸ್ಟರ್ ಆಗಿದೆ.
ರಾಜ್ಯ ಸರ್ಕಾರದ ಅಧಿಕೃತ ಇಲಾಖೆಯೊಂದು ಸಾರ್ವಜನಿಕ ಪ್ರಕಟಣೆ ಹೊರಡಿಸುವಾಗ ಕನಿಷ್ಠ ಭಾಷಾ ಶುದ್ಧತೆಯನ್ನು ಕಾಯ್ದುಕೊಳ್ಳದೆ, ಇಷ್ಟೊಂದು ವಿಕೃತವಾಗಿ ಕನ್ನಡವನ್ನು ಬಳಸಿರುವುದು ಇಲಾಖೆಯ ಆಡಳಿತ ಭಾಷಾ ಬದ್ಧತೆಯನ್ನು ಅಣಕಿಸುವಂತಿದೆ.
ಒoದು ವೇಳೆ ಈ ಪೋಸ್ಟರ್ ಅನ್ನು ಯಾವುದೇ ಇಲಾಖೆಯ ಅನುಮತಿ ಇಲ್ಲದೆ ಖಾಸಗಿ ಹೋಂಸ್ಟೇ ಮಾಲೀಕರು, ಗೈಡ್ಗಳು ಅಥವಾ ಟ್ರೆಕ್ಕಿಂಗ್ ಏಜೆನ್ಸಿಗಳು ಸಿದ್ಧಪಡಿಸಿ ಹರಿಬಿಟ್ಟಿದ್ದೇ ಆದಲ್ಲಿ, ಇದು ಕಾನೂನುಬಾಹಿರ ಮತ್ತು ಗಂಭೀರ ಅಪರಾಧವಾಗಿದೆ.
ಇಲಾಖೆಯ ಅಧಿಕೃತ ಮೊಹರು ಇಲ್ಲದೆ ಇಂತಹ ಪ್ರಕಟಣೆಗಳನ್ನು ಬಿಡುಗಡೆ ಮಾಡುವುದರಿಂದ ಸಾರ್ವಜನಿಕರಲ್ಲಿ ಮತ್ತು ದೂರದ ಊರುಗಳಿಂದ ಬರುವ ಪ್ರವಾಸಿಗರಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ. ಸರ್ಕಾರದ ಆದೇಶದ ಹೆಸರಿನಲ್ಲಿ ಖಾಸಗಿಯವರು ತಾವೇ ನಿರ್ಧಾರ ಕೈಗೊಂಡು ಪೋಸ್ಟರ್ ಮಾಡಿದರೆ, ಇಲಾಖೆಯ ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸಿದoತಾಗುತ್ತದೆ.ಅಧಿಕೃತ ಮಾಹಿತಿ ಇಲ್ಲದೆ ಚಾರಣಿಗರು ಗೊಂದಲಕ್ಕೊಳಗಾಗಿ ತಮ್ಮ ಪ್ರವಾಸವನ್ನು ರದ್ದುಗೊಳಿಸುವುದರಿಂದ ಸ್ಥಳೀಯ ಪ್ರವಾಸೋದ್ಯಮದ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೆ ಜನರಿಗೆ ಸುಳ್ಳು ಸುದ್ದಿಯನ್ನು ಹರಡಿಸಿದರೂ ಇಲಾಖೆಯ ಹೆಸರಿಗೆ ದಕ್ಕೆ ಉಂಟಾಗುತ್ತದೆ.
ಈ ಭಾಷಾ ದ್ರೋಹ ಮತ್ತು ಗೊಂದಲದ ವಿರುದ್ಧ ತೀವ್ರವಾಗಿ ಧ್ವನಿ ಎತ್ತಿರುವ ಸ್ಥಳೀಯ ಕನ್ನಡಾಭಿಮಾನಿ ಚಂದ್ರಮೋಹನ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ನೆಲದಲ್ಲಿಯೇ ಕನ್ನಡ ಭಾಷೆಯನ್ನು ಇಷ್ಟೊಂದು ವಿಕೃತವಾಗಿ ಕೊಲೆ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಒಂದು ಅಧಿಕೃತ ಪ್ರಕಟಣೆಯಲ್ಲಿ ಕನಿಷ್ಠ ಅಕ್ಷರಶುದ್ಧಿ ಇಲ್ಲದಿರುವುದು ನಾಚಿಕೆಗೇಡು. ಅರಣ್ಯ ಇಲಾಖೆ ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಳ್ಳಲು ಹೇಗೆ ಸಾಧ್ಯ? ಇದು ಇಲಾಖೆಯದ್ದೇ ಪ್ರಕಟಣೆಯಾಗಿದ್ದರೆ ತಕ್ಷಣವೇ ತಿದ್ದುಪಡಿ ಮಾಡಿ ಸಾರ್ವಜನಿಕರ ಕ್ಷಮೆಯಾಚಿಸಬೇಕು. ಒಂದು ವೇಳೆ ಇದು ಖಾಸಗಿ ವ್ಯಕ್ತಿಗಳ ಕಿಡಿಗೇಡಿತನವಾಗಿದ್ದರೆ, ಇಲಾಖೆಯ ಹೆಸರನ್ನು ದುರುಪಯೋಗಪಡಿಸಿಕೊಂಡು, ಕನ್ನಡವನ್ನು ಅವಮಾನಿಸಿದ ಅವರ ವಿರುದ್ಧ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಚಂದ್ರಮೋಹನ್ ಅವರು ಬಲವಾಗಿ ಒತ್ತಾಯಿಸಿದ್ದಾರೆ.
ಒಟ್ಟಾರೆಯಾಗಿ, ಈ ವಿವಾದಾತ್ಮಕ ಪೋಸ್ಟರ್ ಅರಣ್ಯ ಇಲಾಖೆಯ ಆಡಳಿತ ವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ. ಈ ಕುರಿತು ಸಂಬAಧಪಟ್ಟ ಮೇಲಧಿಕಾರಿಗಳು ತಕ್ಷಣವೇ ಸ್ಪಷ್ಟನೆ ನೀಡಿ, ಕನ್ನಡ ಭಾಷೆಯ ಗೌರವವನ್ನು ಕಾಪಾಡಬೇಕಿದೆ.
