ಕಳಸ ಲೈವ್ ವರದಿ
ಕಳಸ ತಾಲೂಕಿನ ಬಾಳೆಹೊಳೆ ಗ್ರಾಮ ವ್ಯಾಪ್ತಿಯಲ್ಲಿ ಬುಧವಾರದ ಮಧ್ಯರಾತ್ರಿ ಇನೋವಾ ಕಾರಿನಲ್ಲಿ ದನ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಕಳಸ ಪೊಲೀಸರು ಬೆನ್ನಟ್ಟಿ, ಜಾನುವಾರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಳೆಹೊಳೆ ಗ್ರಾಮದ ವ್ಯಾಪ್ತಿಯಲ್ಲಿ ಬುಧವಾರ ತಡರಾತ್ರಿ ಇನೋವಾ ಕಾರೊಂದರಲ್ಲಿ ಕಳ್ಳರು ದನವನ್ನು ತುಂಬಿಕೊ0ಡು ಪರಾರಿಯಾಗಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಕಳಸ ಪೊಲೀಸರು ಕಳ್ಳರ ಕಾರನ್ನು ಬೆನ್ನಟ್ಟಿದ್ದಾರೆ. ಕಳ್ಳರು ಹಳುವಳ್ಳಿ, ಮಾರ್ಗವಾಗಿ, ಹೊರನಾಡು, ದಾರಿಮನೆ ದಾರಿಯಾಗಿ ಮತ್ತೆ ಬಾಳೆಹೊಳೆ, ಕೆಳಭಾಗ ದಾರಿಯಲ್ಲಿ ಕಳ್ಳರು ತಮ್ಮ ಕಾರನ್ನು ಚಲಾಯಿಸಿದ್ದಾರೆ.ಕೊನೆಗೆ ಬಿಳೂಗೂರು ಎಂಬಲ್ಲಿ ತೋಟಕ್ಕೆ ನುಗ್ಗಿಸಿದ ಖದೀಮರು ಅಲ್ಲಿ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾರೆ. ಇನ್ನೋವಾ ಕಾರು ಮತ್ತು ಕಾರಿನಲ್ಲಿದ್ದ ದನವನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ದನ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಕಳಸ ಪೊಲೀಸರು, ಘಟನೆಗೆ ಸಂಬ0ಧಿಸಿದ0ತೆ ದೂರು ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ತಕ್ಷಣವೇ ಜಾಲ ಬೀಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಳಸ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾನುವಾರು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ರೈತರಲ್ಲಿ ಆತಂಕ ಮೂಡಿಸಿತ್ತು. ಈ ಬೆನ್ನಲ್ಲೇ ಕಳಸ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿರುವುದು ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸ್ಥಳೀಯರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಶ್ಲಾಘಿಸಿದ್ದಾರೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ ಈ ತಂಡದಲ್ಲಿ ಕಳಸ ಪೊಲೀಸ್ ಠಾಣಾಧಿಕಾರಿ (ಪಿಎಸ್ಐ) ಚಂದ್ರಶೇಖರ್, ಸಿಬ್ಬಂದಿಗಳಾದ ಶಿವಕುಮಾರ್, ಕಾಶಿ, ಸಿದ್ದಪ್ಪ, ಪ್ರಮೋದ್, ನಿಖಿಲ್, ಮಾರುತಿ ಹಾಗೂ ವಿಶ್ವನಾಥ್ ಪಾಲ್ಗೊಂಡಿದ್ದರು.
