ಕಳಸ ಲೈವ್ ವರದಿ
ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ನೂರಾರು ಹಿರಿಕಿರಿಯ ಮುಖಂಡರು ಮತ್ತು ಕಾರ್ಯಕರ್ತರು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಶಾಸಕಿ ನಯನಾ ಮೋಟಮ್ಮನವರನ್ನು ಬೆಂಬಲಿಸಿ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರವನ್ನು ನೀಡಿದರು.
ಮೂಡಿಗೆರೆ ಕ್ಷೇತ್ರದ ಆಲ್ದೂರು, ಕಳಸ ಬ್ಲಾಕ್ ಗಳ ಅಧ್ಯಕ್ಷರು, ಎಲ್ಲಾ ಹೋಬಳಿಗಳ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು, ಕ್ಷೇತ್ರದ ಬಹುತೇಕ ಎಲ್ಲಾ ಬೂತ್ ಗಳ ಅಧ್ಯಕ್ಷರು ಸೇರಿದಂತೆ ಸುಮಾರು 400ಕ್ಕೂ ಅಧಿಕ ಕಾರ್ಯಕರ್ತರು ನಯನಾ ಮೋಟಮ್ಮನವರನ್ನು ಬೆಂಬಲಿಸಿ ಬೆಂಗಳೂರಿಗೆ ತೆರಳಿದ್ದರು.
ಇತ್ತೀಚೆಗೆ ಮೂಡಿಗೆರೆಯ ಕೆಲ ಹಿರಿಯ ಕಾಂಗ್ರೇಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಶಾಸಕಿ ನಯನಾ ಮೋಟಮ್ಮನವರ ವಿರುದ್ಧ ಹಲವು ಆರೋಪಗಳನ್ನು ಮಾಡಿ ದೂರು ನೀಡಿದ್ದರು.
ಇದಕ್ಕೆ ಪ್ರತಿಕ್ರಿಯೆ ಎಂಬ0ತೆ ಶುಕ್ರವಾರ ಶಾಸಕಿ ನಯನಾ ಮೋಟಮ್ಮನವರನ್ನು ಬೆಂಬಲಿಸಿ ದೊಡ್ಡ ಸಂಖ್ಯೆಯಲ್ಲಿ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರು ಕೆ.ಪಿ.ಸಿ.ಸಿ. ಅಧ್ಯಕ್ಷರಿಗೆ ತಮ್ಮ ಅಹವಾಲು ಸಲ್ಲಿಸಿದರು. ಈ ಸಂದರ್ಭದಲ್ಲಿ ನಯನಾ ಮೋಟಮ್ಮ ಅವರಿಗೆ ಬೆಂಬಲ ಸೂಚಿಸುವುದರ ಜೊತೆಗೆ ಕೆಲವು ಹಿರಿಯ ಮುಖಂಡರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ದೂರು ನೀಡಿದರು
ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಿದ ಪತ್ರದ ಪ್ರಮುಖ ಮುಖ್ಯಾಂಶಗಳು:
ಸರ್ವಸಮ್ಮತ ನಾಯಕತ್ವ ಹಾಗೂ ಭರ್ಜರಿ ಗೆಲುವು: ನಯನಾ ಮೋಟಮ್ಮ ಅವರು ಕ್ಷೇತ್ರಕ್ಕೆ ದಿಢೀರ್ ಬಂದವರಲ್ಲ. ಕಳೆದ 2018ರಿಂದಲೇ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಧೃತಿಗೆಟ್ಟಿದ್ದ ಕಾರ್ಯಕರ್ತರಲ್ಲಿ ಹೊಸ ಭರವಸೆ ತುಂಬಿದ್ದಾರೆ. ದಲಿತ, ಹಿಂದುಳಿದ, ಮೈನಾರಿಟಿ ಹಾಗೂ ಪ್ರಬಲ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ದ ಕಾರಣಕ್ಕೇ 2023ರ ಚುನಾವಣೆಯಲ್ಲಿ ಕಾಂಗ್ರೆಸ್ 20 ವರ್ಷಗಳ ಬಳಿಕ ಕಿರಿದಾದ ಅಂತರದಲ್ಲಾದರೂ ಭರ್ಜರಿ ಪುನರಾಗಮನ ಮಾಡಲು ಸಾಧ್ಯವಾಯಿತು ಎಂದು ಪತ್ರದಲ್ಲಿ ನೆನಪಿಸಲಾಗಿದೆ.
ಕಾಂಗ್ರೆಸ್ ಕಚೇರಿ ದುರುಪಯೋಗದ ಆರೋಪ: ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಶೇಖರ್ ಅವರ ಹೆಸರಿನಲ್ಲಿ ಪಕ್ಷದ ಅಧಿಕೃತ ಕಚೇರಿಯ ಅಗ್ರಿಮೆಂಟ್ ಮಾಡಿಕೊಳ್ಳಲಾಗಿದ್ದು, ಅದರ ಅಡಿಯಲ್ಲಿ ಬರುವ 7 ಮಳಿಗೆಗಳಿಂದ ತಿಂಗಳಿಗೆ 70 ಸಾವಿರಕ್ಕೂ ಅಧಿಕ ಬಾಡಿಗೆ ಹಣವನ್ನು ಪಡೆಯಲಾಗುತ್ತಿದೆ. ಅಲ್ಲದೆ ಈ ಮಳಿಗೆಗಳನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಲಾಗಿದ್ದು, ಕಳೆದ 9 ವರ್ಷಗಳಿಂದ ಕಟ್ಟಡ ಕಾಮಗಾರಿಯ ಸರಿಯಾದ ಲೆಕ್ಕವನ್ನೂ ನೀಡದೆ ಕಚೇರಿಯನ್ನು ಪಕ್ಷಕ್ಕೆ ಬಿಟ್ಟುಕೊಟ್ಟಿಲ್ಲ ಎಂದು ನಿಯೋಗ ದೂರಿದೆ.
ಸುಸಜ್ಜಿತ ಶಾಸಕರ ಕಚೇರಿ ಆರಂಭ: ಅಧಿಕೃತ ಕಚೇರಿ ಸುಪರ್ದಿಯಲ್ಲಿಲ್ಲದ ಕಾರಣ, ಶಾಸಕರು ಸಾರ್ವಜನಿಕರ ಹಿತದೃಷ್ಟಿಯಿಂದ ಸುಶಾಂತ್ ನಗರದಲ್ಲಿ ಸುಸಜ್ಜಿತ ಹೊಸ ಕಚೇರಿ ತೆರೆದಿದ್ದಾರೆ. ಪ್ರತಿ ಸೋಮವಾರದಿಂದ ಗುರುವಾರದವರೆಗೆ ಸ್ವತಃ ಶಾಸಕರು ಲಭ್ಯವಿರುತ್ತಾರೆ ಹಾಗೂ ಉಳಿದ ದಿನಗಳಲ್ಲಿ ಮೂರು ಬ್ಲಾಕ್ಗಳ ಆಪ್ತ ಸಹಾಯಕರು ಸಾರ್ವಜನಿಕರ ಸೇವೆಗೆ ಲಭ್ಯವಿರುತ್ತಾರೆ.
ಹಿರಿಯ ನಾಯಕರ ಹೊಂದಾಣಿಕೆ ಕೊರತೆ: ಶಾಸಕರು ಯಾರನ್ನೂ ಕಡೆಗಣಿಸಿಲ್ಲ. ಆದರೆ ಹಿರಿಯ ನಾಯಕರ ಹಠಮಾರಿ ಧೋರಣೆಯಿಂದ ಅವರೇ ದೂರ ಉಳಿದಿದ್ದಾರೆ. ಮೂಡಿಗೆರೆ ಬ್ಲಾಕ್ ಅಧ್ಯಕ್ಷರ ನಾಯಕತ್ವದ ವೈಫಲ್ಯದಿಂದಾಗಿ ಕೇವಲ ಮೂಡಿಗೆರೆ ಬ್ಲಾಕ್ನಲ್ಲಿ ಮಾತ್ರ ಸಮನ್ವಯದ ಕೊರತೆಯಿದೆ. ಕಳಸ ಮತ್ತು ಆಲ್ದೂರು ಬ್ಲಾಕ್ಗಳಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಮೋದ್ ಮುತಾಲಿಕ್ ಕಾರ್ಯಕ್ರಮದ ವಿವಾದಕ್ಕೆ ಸ್ಪಷ್ಟನೆ: ಮೂಡಿಗೆರೆ ತಾಲೂಕು ಪಟ್ಟಣ ಸಾರ್ವಜನಿಕ ಗಣಪತಿ ಸಮಿತಿಯ ಕಾರ್ಯಕ್ರಮವು ಸಾರ್ವಜನಿಕ ಕಾರ್ಯಕ್ರಮವಾಗಿದ್ದು, ಶಾಸಕರು ಅದರ ಕಾರ್ಯಾಧ್ಯಕ್ಷರಾಗಿದ್ದ ಕಾರಣ ಭಾಗವಹಿಸಿದ್ದರು. ಅಲ್ಲಿ ಮುಖ್ಯ ಅತಿಥಿಯಾಗಿದ್ದ ಪ್ರಮೋದ್ ಮುತಾಲಿಕ್ ಅವರೊಂದಿಗೆ ವೇದಿಕೆ ಹಂಚಿಕೊ0ಡಿದ್ದನ್ನು ವಿರೋಧಿಸುವುದು ಸರಿಯಲ್ಲ ಎಂದು ಪತ್ರದಲ್ಲಿ ಸಮರ್ಥಿಸಿಕೊಳ್ಳಲಾಗಿದೆ.
ಅನುದಾನ ಹಂಚಿಕೆಯಲ್ಲಿ ತಾರತಮ್ಯವಿಲ್ಲ: ಚುನಾವಣೆ ಗೆದ್ದ ಬಳಿಕ ಶಾಸಕರು ಎಲ್ಲಾ ಮೂರು ಬ್ಲಾಕ್ ಅಧ್ಯಕ್ಷರು ಹಾಗೂ 9 ಹೋಬಳಿಗಳ ಅಧ್ಯಕ್ಷರೊಂದಿಗೆ ಚರ್ಚಿಸಿಯೇ ಸಮಾನವಾಗಿ ಅನುದಾನ ಹಂಚಿಕೆ ಮಾಡಿದ್ದಾರೆ.
ವೈಟ್ ಕಾಲರ್ ರಾಜಕಾರಣಿಗಳಿಂದ ಪಕ್ಷಕ್ಕೆ ಮುಖಭಂಗ: ಶಾಸಕಿಯ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಮುಖಂಡರು ಕೇವಲ ‘ವೈಟ್ ಕಾಲರ್’ ರಾಜಕಾರಣಿಗಳಾಗಿದ್ದು, ಜನಸಾಮಾನ್ಯರೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ. ಇತ್ತೀಚೆಗೆ ನಡೆದ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಶಾಸಕರನ್ನು ಕಡೆಗಣಿಸಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದರಿ0ದಲೇ ಕಾಂಗ್ರೆಸ್ ಒಂದೂ ಸೀಟು ಗೆಲ್ಲಲಾಗದೆ ಮುಖಭಂಗ ಅನುಭವಿಸಬೇಕಾಯಿತು ಎಂದು ನಿಯೋಗ ಉದಾಹರಣೆ ಸಮೇತ ವಿವರಿಸಿದೆ.
ಶಿಸ್ತು ಕ್ರಮಕ್ಕೆ ಆಗ್ರಹ: “ಕಳೆದ 20 ವರ್ಷಗಳ ಕಾಲ ಮೂಡಿಗೆರೆಯಲ್ಲಿ ಕಾಂಗ್ರೆಸ್ ಅಧಿಕಾರದಿಂದ ದೂರ ಉಳಿಯಲು ಇಂತಹ ಹಿರಿಯ ನಾಯಕರ ನಿಷ್ಕ್ರಿಯತೆ ಮತ್ತು ಅಹಂಕಾರವೇ ಕಾರಣ. ಈಗ ಯುವ ಶಾಸಕಿಯ ನೇತೃತ್ವದಲ್ಲಿ ಪಕ್ಷ ಗೆದ್ದಿದ್ದರೂ ಗೊಂದಲ ಮೂಡಿಸುತ್ತಿರುವ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು” ಎಂದು ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಯವರ ಭೇಟಿ – ಸಚಿವ ಸ್ಥಾನಕ್ಕೆ ಒತ್ತಾಯ:
ಕೆಪಿಸಿಸಿ ಅಧ್ಯಕ್ಷರ ಭೇಟಿಯ ನಂತರ ಬೃಹತ್ ನಿಯೋಗವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿತು. ಮೂಡಿಗೆರೆ ಕ್ಷೇತ್ರದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಲು ಶಾಸಕಿ ನಯನಾ ಮೋಟಮ್ಮ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ (ಸಚಿವ ಸ್ಥಾನ) ನೀಡಬೇಕು ಎಂದು ಮುಖಂಡರು ಈ ಸಂದರ್ಭದಲ್ಲಿ ಬಲವಾಗಿ ಒತ್ತಾಯಿಸಿದರು.
ನಿಯೋಗದಲ್ಲಿ ಕಳಸ ಬ್ಲಾಕ್ ನಿಂದ ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್, ಮುಖಂಡರಾದ ಮಹಮ್ಮದ್ ರಫೀಕ್, ವಿಶ್ವನಾಥ್, ವೀರೇಂದ್ರ ಜೈನ್, ಮಹೇಶ್ ಕೆಸಿ, ಸುಜಿತ್ ಬೆಳ್ಳ, ಚಂದ್ರು, ರಂಜಿತ್, ರಘು, ಉಮೇಶ್ ಸೇರಿದಂತೆ ಇಪ್ಪತೈದಕ್ಕೂ ಹೆಚ್ಚು ಮುಖಂಡರು ತೆರಳಿದ್ದರು.
