ಕಳಸ ಲೈವ್ ವರದಿ
ಶಿಕ್ಷಣ ಇಲಾಖೆಯು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಶನಿವಾರದ ಶಾಲಾ ಸಮಯವನ್ನು ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 12:30ಕ್ಕೆ ನಿಗದಿಪಡಿಸಿ ಹೊರಡಿಸಿದ್ದ ಆದೇಶವನ್ನು, ಮಲೆನಾಡು ಭಾಗದ ಭೌಗೋಳಿಕ ಪರಿಸ್ಥಿತಿಯನ್ನು ಪರಿಗಣಿಸಿ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30 ರವರೆಗೆ ಬದಲಾಯಿಸಿ ಇಲಾಖೆ ಆದೇಶ ಹೊರಡಿಸಿದೆ.
ಪ್ರಸ್ತುತ ನಿಯಮಾವಳಿಗಳ ಪ್ರಕಾರ, ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10:00 ರಿಂದ ಸಾಯಂಕಾಲ 4:15 ರವರೆಗೆ ಹಾಗೂ ಶನಿವಾರ ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 12:30 ರವರೆಗೆ ಶಾಲಾ ಅವಧಿಯನ್ನು ನಿಗದಿ ಮಾಡಲಾಗಿತ್ತು.
ಈ ನಿಯಮದಿಂದ ಮಲೆನಾಡಿನ ಮಕ್ಕಳಿಗೆ ಆಗುತ್ತಿದ್ದ ತೊಂದರೆಗಳ ಕುರಿತು ಜುಲೈ 5ರಂದು ಕಳಸ ವೈವ್ ವೆಬ್ ನ್ಯೂಸ್ ನಲ್ಲಿ “ಮಲೆನಾಡಿಗೆ ಶಾಪವಾದ ಶನಿವಾರದ ಶಾಲಾ ಸಮಯ: ಕಲಸದ ಗ್ರಾಮೀಣ ವಿದ್ಯಾರ್ಥಿಗಳ ಪರದಾಟ ಎಂಬ ಶೀರ್ಷಿಕೆಯಡಿಯಲ್ಲಿ ಸವಿಸ್ತಾರವಾದ ವರದಿಯನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.
ಕಳಸ ಪಟ್ಟಣದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಆಶ್ರಯಿಸಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಗೆ ಬರಲು ಕನಿಷ್ಠ 15 ರಿಂದ 20 ಕಿಲೋಮೀಟರ್ ಕ್ರಮಿಸಬೇಕಾಗುತ್ತದೆ. ಹಳ್ಳಿಗಳ ಒಳ ರಸ್ತೆಗಳಿಂದ ಮುಖ್ಯ ರಸ್ತೆಗೆ ಬರಲು ವಿದ್ಯಾರ್ಥಿಗಳು ನಿತ್ಯ 3 ರಿಂದ 4 ಕಿ.ಮೀ ಕಾಲ್ನಡಿಗೆಯಲ್ಲೇ ಸಾಗಬೇಕು. ಸಾಮಾನ್ಯ ದಿನಗಳಲ್ಲಿ 9:30ಕ್ಕೆ ಶಾಲೆ ತಲುಪಲು ಮಕ್ಕಳು ಬೆಳಿಗ್ಗೆ 6:30ಕ್ಕೇ ಮನೆ ಬಿಡುತ್ತಾರೆ. ಆದರೆ, ಶನಿವಾರ 8:30ಕ್ಕೆ ಶಾಲೆಗೆ ಹಾಜರಾಗಬೇಕಾದರೆ ಮಕ್ಕಳು ಬೆಳಿಗ್ಗೆ 5:30ಕ್ಕೇ ಮನೆಯಿಂದ ಹೊರಡಬೇಕಾದ ಅನಿವಾರ್ಯತೆ ಇತ್ತು. ಇದರಿಂದಾಗಿ ಶನಿವಾರದ ದಿನಗಳಲ್ಲಿ ಮಕ್ಕಳ ಗೈರುಹಾಜರಿ ಹೆಚ್ಚಾಗುತ್ತಿತ್ತು. ಅಲ್ಲದೆ ಬೆಳ್ಳಂಬೆಳಗ್ಗೆ ಕಾಡಿನ ದಾರಿಯಲ್ಲಿ ಬರುವುದರಿಂದ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೂ ಅಪಾಯವಿತ್ತು.
ರಾಜ್ಯಾದ್ಯಂತ ಒಂದೇ ನಿಯಮ ಹೇರುವ ಬದಲು ಪ್ರಾದೇಶಿಕ ಬದಲಾವಣೆಗಳಿಗೆ ಮುಕ್ತ ಅವಕಾಶ ನೀಡಬೇಕು ಮತ್ತು ಶನಿವಾರದ ಸಮಯವನ್ನು 9:30 ರಿಂದ 1:30ಕ್ಕೆ ಬದಲಾಯಿಸಿದರೆ ಮಕ್ಕಳು ನಿಯಮಿತ ಬಸ್ ಸೌಕರ್ಯಗಳನ್ನು ಬಳಸಿಕೊಂಡು ಸರಿಯಾದ ಸಮಯಕ್ಕೆ ತಲುಪಬಹುದು ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು.
ಪತ್ರಿಕಾ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತವಾಗಿದೆ. ಮಲೆನಾಡು ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಗೆ ಶನಿವಾರದ ಶಾಲಾ ಸಮಯವನ್ನು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30 ರವರೆಗೆ ನಡೆಸಲು ತಿಳಿಸಿದೆ.
ಕೋಟ್:ಡಿಡಿಪಿಐ ತಿಮ್ಮರಾಜು
“ಶನಿವಾರ ಬೆಳಿಗ್ಗೆ 8:30ಕ್ಕೆ ಶಾಲೆ ಪ್ರಾರಂಭಿಸುವುದರಿAದ ಮಲೆನಾಡು ಭಾಗದ ವಿದ್ಯಾರ್ಥಿಗಳಿಗೆ ಎದುರಾಗುವ ಕಷ್ಟಗಳ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಇಲಾಖೆಯ ಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ, ಪ್ರಾದೇಶಿಕ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು ಇಲಾಖೆಯು ಒಪ್ಪಿಗೆ ನೀಡಿದೆ. ಅಲ್ಲದೆ, ಇದಕ್ಕೆ ಸಂಬAಧಿಸಿದ ಆಪ್ ನಲ್ಲೂ ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು, ಹೊಸ ಸಮಯವನ್ನು ಜಾರಿಗೆ ತರಲಾಗಿದೆ.”
