
ಕಳಸ ಲೈವ್ ವರದಿ
ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಶ್ರೀಗಂಧ ಫೌಂಡೇಷನ್ ವತಿಯಿಂದ 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಅತ್ಯಾಧುನಿಕ ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನದ ಸ್ಮಾರ್ಟ್ ತರಗತಿಯ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲೆಗೆ ಎಐ ತಂತ್ರಜ್ಞಾನದ ಕಿಟ್ ಹಸ್ತಾಂತರಿಸಿ ಮಾತನಾಡಿದ ಫೌಂಡೇಷನ್ ಸದಸ್ಯ ಚೇತನ್ ಪ್ರಸಾದ್, ನಾವು ನಿಮ್ಮ ತರಗತಿ ಕೋಣೆಗಳಿಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ತಂದಿದ್ದೇವೆ. ಇದು ಕೇವಲ ತಾಂತ್ರಿಕ ಬದಲಾವಣೆಯಲ್ಲ, ಬದಲಿಗೆ ಶಿಕ್ಷಣ ರಂಗದಲ್ಲಿ ಒಂದು ದೊಡ್ಡ ಕ್ರಾಂತಿಯಾಗಿದೆ. ತರಗತಿಯಲ್ಲಿ ಎಲ್ಲ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಒಂದೇ ತರ ಇರುವುದಿಲ್ಲ. ಕೆಲವರು ಬೇಗ ಅರ್ಥ ಮಾಡಿಕೊಂಡರೆ, ಇನ್ನು ಕೆಲವರಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಈ ಎಐ ತಂತ್ರಜ್ಞಾನವು ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ವೇಗಕ್ಕೆ ತಕ್ಕಂತೆ, ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಪಾಠಗಳನ್ನು ಪ್ರಸ್ತುತಪಡಿಸುತ್ತದೆ. ಪುಸ್ತಕದ ಓದಿಗಿಂತ ವಿಜ್ಞಾನದ ಪ್ರಯೋಗಗಳು ಅಥವಾ ಇತಿಹಾಸದ ಘಟನೆಗಳನ್ನು 3ಡಿ ಅನಿಮೇಷನ್ ಹಾಗೂ ಗ್ರಾಫಿಕ್ಸ್ ಮೂಲಕ ಪರದೆಯ ಮೇಲೆ ನೋಡಿದಾಗ ಅದು ಮನಸ್ಸಿನಲ್ಲಿ ಅಚ್ಚೊತ್ತುತ್ತದೆ. ಕಲಿಯುವಾಗ ಯಾವುದೇ ಗೊಂದಲ ಉಂಟಾದರೂ, ಈ ಸ್ಮಾರ್ಟ್ ಸಿಸ್ಟಮ್ಗಳು ತಕ್ಷಣವೇ ಸೂಕ್ತ ಉದಾಹರಣೆಗಳೊಂದಿಗೆ ವಿವರಣೆ ನೀಡಬಲ್ಲವು ಎಂದು ಅವರು ಎಐ ತಂತ್ರಜ್ಞಾನದ ಮಹತ್ವವನ್ನು ವಿವರಿಸಿದರು.

ಶಾಲೆಯ ಆಡಳಿತ ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ಭಟ್ ಮಾತನಾಡಿ, “ಕೇವಲ 25 ಮಕ್ಕಳಿಂದ ಪ್ರಾರಂಭವಾದ ನಮ್ಮ ಶಾಲೆ ಇವತ್ತು ಈ ಮಟ್ಟದಲ್ಲಿ ಬೆಳೆಯಲು ಹಲವಾರು ದಾನಿಗಳ ಕೊಡುಗೆಯೇ ಕಾರಣ. ಇಂದು ಶ್ರೀಗಂಧ ಫೌಂಡೇಷನ್ ಮಕ್ಕಳಿಗೆ ಎಐ ತಂತ್ರಜ್ಞಾನದ ಶಿಕ್ಷಣ ಹಾಗೂ 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿರುವುದು ಶ್ಲಾಘನೀಯ. ಈ ವಿದ್ಯಾರ್ಥಿವೇತನ ಕೇವಲ 10ನೇ ತರಗತಿಗೆ ಮಾತ್ರ ಸೀಮಿತವಾಗಿರದೆ, ಆಯ್ಕೆಯಾದ ವಿದ್ಯಾರ್ಥಿ ಮುಂದೆ ಎಲ್ಲಿಯವರೆಗೆ ಶಿಕ್ಷಣ ಪಡೆಯುತ್ತಾನೋ ಅಲ್ಲಿಯವರೆಗೂ ನಿರಂತರವಾಗಿ ಸಿಗಲಿದೆ. ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ಮುಂದೆ ಉದ್ಯೋಗ ಪಡೆದ ಮೇಲೆ, ನಿಮ್ಮ ದುಡಿಮೆಯ ಒಂದು ಪಾಲನ್ನು ಶ್ರೀಗಂಧ ಫೌಂಡೇಷನ್ನAತಹ ಸಂಸ್ಥೆಗಳಿಗೆ ನೀಡುವ ಮೂಲಕ ಮತ್ತೊಬ್ಬ ಬಡ ವಿದ್ಯಾರ್ಥಿಯ ಶಿಕ್ಷಣಕ್ಕೆ ನೆರವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀಗಂಧ ಫೌಂಡೇಷನ್ನ ಸದಸ್ಯರಾದ ಕಿರಣ್, ಮನೋಹರ್, ಅನಿತಾ ಶೆಣೈ, ರಮೇಶ್ ನಾಯಕ್, ಪಲ್ಲವಿ, ಭರತ್, ಗುರುಪ್ರಸಾದ್ ಭಟ್ ಹಾಗೂ ಶಾಲಾ ಮುಖ್ಯ ಶಿಕ್ಷಕ ಆನಂದ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
