
ಕಳಸ ಲೈವ್ ವರದಿ
ವಿವೇಕಾನಂದ ಫಿಟ್ನೆಸ್ ಅಕಾಡಮಿ ಚಿಕ್ಕಮಗಳೂರು ಇವರ ವತಿಯಿಂದ ಕಳಸದಲ್ಲಿ ಹಮ್ಮಿಕೊಳ್ಳಲಾಗಿರುವ ಟೆಕ್ವಾಂಡೋ, ಕಳರಿಪಯಟ್ಟು ಹಾಗೂ ಫೆಂಕಾಕ್ ಸಿಲಾತ್ ಸಮರಕಲೆಗಳ ತರಬೇತಿ ತರಗತಿಗಳಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ಮಾಜಿ ಅಧ್ಯಕ್ಷೆ ಸುಜಯ ಸದಾನಂದ ಅವರು, ಕರಾಟೆ ಮತ್ತು ಕ್ರೀಡೆಗಳು ಬದುಕಿಗೆ ಶ್ರೀರಕ್ಷೆಯಾಗಿವೆ. ಇವು ಜೀವನದಲ್ಲಿ ಶಿಸ್ತಿನ ಹೆಜ್ಜೆ ಹಾಗೂ ಧೈರ್ಯದ ನಡೆಯನ್ನು ಕಲಿಸಿಕೊಡುವುದಲ್ಲದೆ, ಪ್ರತಿಯೊಬ್ಬರ ಆತ್ಮರಕ್ಷಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಇಲ್ಲಿ ತರಬೇತಿ ಪಡೆಯುವ ಪ್ರತಿಯೊಂದು ಮಗುವೂ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿ ಬೆಳೆಯಲು ಇಂತಹ ಕಲೆಗಳು ಅತ್ಯಂತ ಸಹಕಾರಿಯಾಗಲಿವೆ ಎಂದು ಹೇಳಿದರು.
ಕರ್ನಾಟಕ ಟೆಕ್ವಾಂಡೋ ಅಸೋಸಿಯೇಷನ್ ಉಪಾಧ್ಯಕ್ಷರಾದ ಗಿರೀಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮರಕಲೆಗಳು ಕೇವಲ ದೈಹಿಕ ಶಕ್ತಿ ಪ್ರದರ್ಶನವಲ್ಲ, ಅವು ಮನಸ್ಸನ್ನು ನಿಯಂತ್ರಿಸುವ ಮತ್ತು ಶಿಸ್ತನ್ನು ರೂಢಿಸಿಕೊಳ್ಳುವ ಅದ್ಭುತ ಮಾಧ್ಯಮ. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಆತ್ಮರಕ್ಷಣೆ ಎಂಬುದು ಅತ್ಯಗತ್ಯವಾಗಿದೆ. ಟೆಕ್ವಾಂಡೋ, ಕಳರಿಪಯಟ್ಟು ಹಾಗೂ ಫೆಂಕಾಕ್ ಸಿಲಾತ್ನಂತಹ ಸಾಂಪ್ರದಾಯಿಕ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಮರಕಲೆಗಳನ್ನು ಕಲಿಯುವುದರಿಂದ ಮಕ್ಕಳಲ್ಲಿ ಏಕಾಗ್ರತೆ, ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳು ಹೆಚ್ಚಾಗುತ್ತವೆ. ಕಳಸದ ವಿದ್ಯಾರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ತರಬೇತುದಾರರಾದ ಯಶ್ವಂತ್, ಸೋಫಿಯಾ, ಪ್ರಬೋಧಿನಿ ವಿದ್ಯಾಕೇಂದ್ರದ ಮುಖ್ಯ ಶಿಕ್ಷಕ ಆನಂದ್, ಶಿಕ್ಷಕಿ ಭಾರತಿ ಇತರರು ಇದ್ದರು.
