
ಕಳಸ ಲೈವ್ ವರದಿ
ಸಂಸಾರದ ಹೊಟ್ಟೆ ತುಂಬಿಸುತ್ತಿದ್ದ, ಕೊಟ್ಟಿಗೆಯ ಲಕ್ಷ್ಮಿಯರಂತಿದ್ದ ಆ ಮೂರು ಜಾನುವಾರುಗಳು ಪ್ರತಿದಿನದಂತೆ ಅಂದೂ ಶಾಂತವಾಗಿ ಮೇಯುತ್ತಿದ್ದವು. ಮನೆಬಾಗಿಲಿಗೆ ಬಂದು ಪ್ರೀತಿಯಿಂದ ತಿನಿಸು ತಿಂದು ಹೋಗುತ್ತಿದ್ದ ಆ ಅಮಾಯಕ ಜೀವಿಗಳಿಗೆ, ತಮ್ಮ ಮೇಲೆ ಸಾವಿನ ತೂಗುಕತ್ತಿ ತೂಗುತ್ತಿದೆ ಎಂಬ ಸಣ್ಣ ಸುಳಿವು ಕೂಡ ಇರಲಿಲ್ಲ. ಆದರೆ, ಮಾನವನ ಅಪಾರ ನಿರ್ಲಕ್ಷ್ಯ ಹಾಗೂ ಜವಾಬ್ದಾರಿಕೆಡಿತನದಿಂದಾಗಿ ಕಳಸ ಪಟ್ಟಣ ಸಮೀಪದ ಕೆಳಬೈಲಿನಲ್ಲಿಂದು ಕರುಳು ಹಿಂಡುವ ಘಟನೆಯೊಂದು ನಡೆದುಹೋಗಿದೆ. ಒಣಗಿದ ಮರವೊಂದು ಹೈ-ಟೆನ್ಷನ್ ವಿದ್ಯುತ್ ತಂತಿಯ ಮೇಲೆ ಬಿದ್ದು, ತಂತಿ ತುಂಡಾಗಿ ಬಿದ್ದ ರಭಸಕ್ಕೆ ಮೂರು ಹಾಲು ನೀಡುವ ಹಸುಗಳು ಸ್ಥಳದಲ್ಲೇ ದಾರುಣವಾಗಿ ಪ್ರಾಣ ಕಳೆದುಕೊಂಡಿವೆ.
ಎಡದಾಳು ಗಿರೀಶ್ ಎಂಬುವರಿಗೆ ಸೇರಿದ ಈ ಹಸುಗಳು ಅವರ ಜೀವನೋಪಾಯದ ಆಸರೆಯಾಗಿದ್ದವು. ತನ್ನ ಜೀವಕ್ಕಿಂತ ಹೆಚ್ಚಾಗಿ ಸಾಕಿ ಬೆಳೆಸಿದ್ದ ಹಸುಗಳು ರಸ್ತೆಯಲ್ಲಿ ಹೆಣವಾಗಿ ಬಿದ್ದಿರುವುದನ್ನು ಕಂಡ ಮಾಲೀಕರು ಹಾಗೂ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಪಘಾತ ಸಂಭವಿಸಿದ ಬೆನ್ನಲ್ಲೇ ರಸ್ತೆಯಲ್ಲಿ ಸಂಚರಿಸಲು ತಯಾರಾಗಿದ್ದ ಲಾರಿಯ ಚಾಲಕ ಸಮಯಪ್ರಜ್ಞೆ ಮೆರೆದ ಪರಿಣಾಮ ದೊಡ್ಡ ದುರಂತ ತಪ್ಪಿದೆ. ಈ ರಸ್ತೆಯಲ್ಲಿ ಪ್ರತಿದಿನ ಶಾಲಾ ಮಕ್ಕಳು, ಸಾರ್ವಜನಿಕರು ಹಾಗೂ ಆಟೋಗಳು ನಿರಂತರವಾಗಿ ಸಂಚರಿಸುತ್ತವೆ. ಒಂದು ವೇಳೆ ಈ ವಿದ್ಯುತ್ ತಂತಿ ಮಕ್ಕಳ ಮೇಲೊ ಅಥವಾ ವಾಹನಗಳ ಮೇಲೊ ಬಿದ್ದಿದ್ದರೆ ಆಗುವ ಅನಾಹುತವನ್ನು ನೆನೆಸಿಕೊಳ್ಳಲು ಸಾಧ್ಯವಿಲ್ಲ.
ರಸ್ತೆ ಬದಿಯಲ್ಲಿ ೧೧ ಕೆ.ವಿ ಹೈ-ಟೆನ್ಷನ್ ವಿದ್ಯುತ್ ಮಾರ್ಗ ಹಾದುಹೋಗಿದ್ದರೂ, ಅದರ ಬದಿಯಲ್ಲಿದ್ದ ಅಪಾಯಕಾರಿ ಒಣಗಿದ ಮರಗಳನ್ನು ತೆರವುಗೊಳಿಸದಿರುವುದೇ ಈ ದುರಂತಕ್ಕೆ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಮಳೆಗಾಲಕ್ಕೆ ಮುಂಚಿತವಾಗಿ ತಮ್ಮ ತೋಟದೊಳಗಿನ ಮರಗಳನ್ನು, ರೆಂಬೆ-ಕೊAಬೆಗಳನ್ನು ಕಟಾವು ಮಾಡಿ ಜಾಗರೂಕತೆ ವಹಿಸಿದ ತೋಟದ ಮಾಲೀಕರು, ಸಾರ್ವಜನಿಕ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಒಣಮರಗಳನ್ನು ಹಾಗೆಯೇ ಬಿಟ್ಟು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಇಲ್ಲಿಯ ಘಟನೆಗೆ ರಸ್ತೆ ಬದಿಯಲ್ಲಿ ರಸ್ತೆಗೆ ವಾಲಿಕೊಂಡು ನಿಂತಿರುವ ಮತ್ತು ಅಪಾಯವನ್ನು ಸೂಚಿಸುತ್ತಿರುವ ಮರಗಳು ಪ್ರತ್ಯಕ್ಷ ಉದಾಹರಣೆಯಾಗಿ ಕಾಣುತ್ತಿವೆ.

ಮಳೆಗಾಲ ಆರಂಭವಾಗುವ ಮುನ್ನವೇ ಲೈನ್ ಸಮೀಪವಿರುವ ಅಪಾಯಕಾರಿ ಮರಗಳು ಹಾಗೂ ಕೊಂಬೆಗಳನ್ನು ಗುರುತಿಸಿ, ತೋಟದ ಮಾಲೀಕರಿಗೆ ಸೂಕ್ತ ಸೂಚನೆ ನೀಡಿ ತೆರವುಗೊಳಿಸುವುದು ಮೆಸ್ಕಾಂ ಇಲಾಖೆಯ ಕರ್ತವ್ಯ. ಆದರೆ, ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯದಿಂದಾಗಿ ಇಂದು ಮೂರು ಪ್ರಾಣಗಳು ಬಲಿಯಾಗಿವೆ. ಇದು ಕೇವಲ ಕೆಳಬೈಲು ಗ್ರಾಮದ ಸ್ಥಿತಿ ಅಲ್ಲ.ಪ್ರತಿಯೊಂದು ರಸ್ತೆಯ ಸಮೀಪದಲ್ಲೂ ವಿದ್ಯುತ್ ಲೈನ್ಗೆ ಮರಗಳು ವಾಲಿ ನಿಂತಿವೆ.
ಘಟನಾ ಸ್ಥಳಕ್ಕೆ ಕಳಸ ಪೊಲೀಸ್ ಸಿಬ್ಬಂದಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳು, ಮೆಸ್ಕಾಂ ಸಿಬ್ಬಂದಿ ಹಾಗೂ ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಮ್ಮ ಜೀವನದ ಆಸರೆಯಾಗಿದ್ದ ಹಾಲು ನೀಡುವ ಹಸುಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿರುವ ಸಂತ್ರಸ್ತ ರೈತ ಎಡದಾಳು ಗಿರೀಶ್ ಅವರಿಗೆ ಸಂಬAಧಪಟ್ಟವರಿAದ ತಕ್ಷಣವೇ ಸೂಕ್ತ ನಷ್ಟಪರಿಹಾರ ದೊರೆಯಬೇಕು ಮತ್ತು ರಸ್ತೆ ಬದಿಯಲ್ಲಿರುವ ಉಳಿದ ಎಲ್ಲಾ ಅಪಾಯಕಾರಿ ಮರಗಳನ್ನು ಕಾಲಮಿತಿಯಲ್ಲಿ ತೆರವುಗೊಳಿಸಬೇಕೆಂದು ಗ್ರಾಮಸ್ಥರು ತೀವ್ರವಾಗಿ ಒತ್ತಾಯಿಸಿದ್ದಾರೆ.

