ಕಳಸ ಲೈವ್ ವರದಿ
(ಸುದೀಶ್ ಸುವರ್ಣ, ಕಳಸ)
ವಿಶ್ವದ ಅತ್ಯಂತ ಶ್ರೀಮಂತ ಜೀವವೈವಿಧ್ಯ ಪ್ರದೇಶಗಳಲ್ಲಿ ಒಂದಾದ ಪಶ್ಚಿಮ ಘಟ್ಟವನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿರುವ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆ ಇದೀಗ ಮಲೆನಾಡು ಭಾಗಗಳಲ್ಲಿ ವ್ಯಾಪಕ ಚರ್ಚೆಗೆ ಹಾಗೂ ಆತಂಕಕ್ಕೆ ಕಾರಣವಾಗಿದೆ. ಪರಿಸರ ಸಂರಕ್ಷಣೆ ಎಂಬ ಉದ್ದೇಶ ಎಲ್ಲರಿಗೂ ಒಪ್ಪಿಗೆಯ ವಿಷಯವಾದರೂ, ಅದರ ಹೆಸರಿನಲ್ಲಿ ಗ್ರಾಮೀಣ ಜನರ ಬದುಕು, ಕೃಷಿ ಚಟುವಟಿಕೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗಬಹುದೇ ಎಂಬ ಪ್ರಶ್ನೆ ಜನರನ್ನು ಕಾಡತೊಡಗಿದೆ.
ಮಲೆನಾಡಿನ ಜನರು ಕಳೆದ ಹಲವು ದಶಕಗಳಿಂದ ಒಂದಲ್ಲ ಒಂದು ಪರಿಸರ ಮತ್ತು ಅರಣ್ಯ ಸಂಬAಧಿತ ಯೋಜನೆಗಳ ಒತ್ತಡವನ್ನು ಎದುರಿಸುತ್ತಲೇ ಬಂದಿದ್ದಾರೆ. ಅಭಯಾರಣ್ಯ ವಿಸ್ತರಣೆ, ಹುಲಿ ಯೋಜನೆ, ಕಸ್ತೂರಿರಂಗನ್ ವರದಿ, ಆನೆ ಕಾರಿಡಾರ್ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಹಲವು ಯೋಜನೆಗಳು ಸ್ಥಳೀಯರ ಬದುಕಿನ ಮೇಲೆ ಪರಿಣಾಮ ಬೀರಿವೆ ಎಂಬ ಆರೋಪಗಳು ಕೇಳಿಬಂದಿವೆ. ಇದೀಗ ಅದೇ ಸಾಲಿಗೆ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆಯೂ ಸೇರ್ಪಡೆಯಾಗಿದ್ದು, ಮಲೆನಾಡಿನ ಜನರಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕರ್ನಾಟಕದಲ್ಲಿ ಸುಮಾರು 20,668 ಚದರ ಕಿಲೋಮೀಟರ್ ಪ್ರದೇಶ ಈ ಕರಡು ಅಧಿಸೂಚನೆ ವ್ಯಾಪ್ತಿಗೆ ಸೇರಿದ್ದು, ಪಶ್ಚಿಮ ಘಟ್ಟ ಹೊಂದಿರುವ ಆರು ರಾಜ್ಯಗಳ ಪೈಕಿ ಕರ್ನಾಟಕವೇ ಅತಿ ಹೆಚ್ಚು ಪ್ರದೇಶವನ್ನು ಹೊಂದಿದೆ. ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳ 460ಕ್ಕೂ ಅಧಿಕ ಗ್ರಾಮಗಳು ಈ ವ್ಯಾಪ್ತಿಗೆ ಒಳಪಟ್ಟಿವೆ.
ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಸುಮಾರು 137 ಗ್ರಾಮಗಳು ಕರಡು ಪಟ್ಟಿಯಲ್ಲಿ ಸೇರಿವೆ. ಕಳಸ ತಾಲೂಕಿನ ಹೊರನಾಡು, ಇಡಕಣಿ, ಕಳಕೋಡು, ಸಂಸೆ, ತನೂಡಿ ಸೇರಿದಂತೆ ಅನೇಕ ಕೃಷಿ ಹಾಗೂ ಜನವಸತಿ ಪ್ರಧಾನ ಗ್ರಾಮಗಳು ಇಎಸ್ಝಡ್ ವ್ಯಾಪ್ತಿಗೆ ಬಂದಿರುವುದು ಸ್ಥಳೀಯ ರೈತರು, ತೋಟಗಾರರು ಮತ್ತು ನಿವಾಸಿಗಳಲ್ಲಿ ಕಳವಳ ಉಂಟುಮಾಡಿದೆ.
ಕಾಫಿ, ಅಡಿಕೆ, ಮೆಣಸು, ಏಲಕ್ಕಿ ಹಾಗೂ ಇತರ ತೋಟಗಾರಿಕಾ ಬೆಳೆಗಳನ್ನು ಅವಲಂಬಿಸಿರುವ ಮಲೆನಾಡಿನ ರೈತರು ತಮ್ಮ ಭೂಮಿಯ ಭವಿಷ್ಯದ ಕುರಿತು ಹಲವು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಭೂಮಿ ಮೇಲಿನ ಹಕ್ಕುಗಳಿಗೆ ಧಕ್ಕೆಯಾಗಬಹುದೇ? ಮುಂದಿನ ದಿನಗಳಲ್ಲಿ ಮನೆ ನಿರ್ಮಾಣ, ವಿಸ್ತರಣೆ ಅಥವಾ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗಬಹುದೇ? ಬ್ಯಾಂಕುಗಳಿAದ ಸಾಲ ಪಡೆಯಲು ತೊಂದರೆ ಎದುರಾಗಬಹುದೇ? ಎಂಬ ಅನುಮಾನಗಳು ಜನರಲ್ಲಿ ಮನೆಮಾಡಿವೆ.
ಅಧಿಸೂಚನೆ ಜಾರಿಯಾದ ಬಳಿಕ ಭೂಮಿಯ ಮಾರುಕಟ್ಟೆ ಮೌಲ್ಯ ಕುಸಿಯುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ಈಗಾಗಲೇ ಅರಣ್ಯ ಗಡಿ, ಸರ್ವೆ ಸಮಸ್ಯೆಗಳು ಹಾಗೂ ವನ್ಯಜೀವಿಗಳ ಹಾವಳಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಮತ್ತೊಂದು ಆಡಳಿತಾತ್ಮಕ ಹೊರೆ ಸೇರ್ಪಡೆಯಾಗಬಹುದೆಂಬ ಆತಂಕ ವ್ಯಕ್ತವಾಗುತ್ತಿದೆ.
ಪರಿಸರ ಸೂಕ್ಷ್ಮ ವಲಯವು ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಅಭಯಾರಣ್ಯಗಳು ಹಾಗೂ ಪ್ರಮುಖ ಪರಿಸರ ಪ್ರದೇಶಗಳ ಸುತ್ತಮುತ್ತಲಿನ ಭಾಗಗಳಲ್ಲಿ ಪರಿಸರಕ್ಕೆ ಹಾನಿಕಾರಕ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಘೋಷಿಸಲಾಗುವ ವಲಯವಾಗಿದೆ. ಇದರ ಮುಖ್ಯ ಉದ್ದೇಶ ಅರಣ್ಯ ನಾಶ, ಮಾಲಿನ್ಯ, ಅಕ್ರಮ ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಹಾಗೂ ಅನಿಯಂತ್ರಿತ ನಗರೀಕರಣವನ್ನು ತಡೆಯುವುದಾಗಿದೆ.
ಸರ್ಕಾರದ ಪ್ರಕಾರ ಇದು ಜನರನ್ನು ಸ್ಥಳಾಂತರಿಸುವ ಯೋಜನೆಯಲ್ಲ. ಬದಲಾಗಿ ಪರಿಸರಕ್ಕೆ ಹಾನಿಕಾರಕ ಚಟುವಟಿಕೆಗಳನ್ನು ನಿಯಂತ್ರಿಸುವ ಮೂಲಕ ಅರಣ್ಯ ಹಾಗೂ ಜೀವವೈವಿಧ್ಯ ಸಂರಕ್ಷಿಸುವ ಕ್ರಮವಾಗಿದೆ.
ಕರಡು ಅಧಿಸೂಚನೆಯ ಪ್ರಕಾರ ಹೊಸ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಮರಳು ಉತ್ಖನನ ಹಾಗೂ ಇತರೆ ಭೂಗರ್ಭ ಸಂಪನ್ಮೂಲಗಳ ಶೋಧನೆ ಮತ್ತು ಗಣಿಗಾರಿಕೆಗೆ ಅವಕಾಶ ಇರುವುದಿಲ್ಲ. ಈಗಾಗಲೇ ಇರುವ ಗಣಿಗಾರಿಕೆ ಗುತ್ತಿಗೆಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸುವ ಪ್ರಸ್ತಾವನೆಯೂ ಇದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿರುವ ಕೆಂಪು ವರ್ಗದ ಮಾಲಿನ್ಯಕಾರಕ ಕೈಗಾರಿಕೆಗಳಿಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಉಷ್ಣ ವಿದ್ಯುತ್ ಸ್ಥಾವರಗಳು, ಬೃಹತ್ ವಾಣಿಜ್ಯ ಸಂಕೀರ್ಣಗಳು ಹಾಗೂ ಪರಿಸರಕ್ಕೆ ಧಕ್ಕೆ ಉಂಟುಮಾಡುವ ದೊಡ್ಡ ನಗರೀಕರಣ ಯೋಜನೆಗಳಿಗೂ ಅವಕಾಶ ಇರುವುದಿಲ್ಲ.
ಜನರಲ್ಲಿ ಹರಡಿರುವ ಹಲವು ಭಯಗಳಿಗೆ ಸರ್ಕಾರ ಸ್ಪಷ್ಟನೆ ನೀಡಿದೆ. ಸ್ಥಳೀಯ ನಿವಾಸಿಗಳು ತಮ್ಮ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಲು, ದುರಸ್ತಿ ಮಾಡಲು ಅಥವಾ ವಿಸ್ತರಿಸಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ರೈತರ ಭೂಮಿ, ತೋಟಗಳು ಹಾಗೂ ಆಸ್ತಿ ಹಕ್ಕುಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ತಿಳಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳನ್ನು ಮುಂದುವರಿಸಲು ಅವಕಾಶವಿದೆ. ಶಾಲೆಗಳು, ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಹಾಗೂ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಸೂಕ್ತ ಅನುಮತಿಗಳೊಂದಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.
ಸರ್ಕಾರದ ಸ್ಪಷ್ಟನೆಗಳಿದ್ದರೂ, ನೆಲಮಟ್ಟದಲ್ಲಿ ಹಲವು ಸವಾಲುಗಳು ಎದುರಾಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇಎಸ್ಝಡ್ ವ್ಯಾಪ್ತಿಯ ಭೂಮಿಯನ್ನು ಅಡಮಾನವಾಗಿ ಸ್ವೀಕರಿಸುವ ಸಂದರ್ಭದಲ್ಲಿ ಬ್ಯಾಂಕುಗಳು ಹೆಚ್ಚುವರಿ ದಾಖಲೆಗಳನ್ನು ಕೇಳುವ ಅಥವಾ ಸಾಲ ಮಂಜೂರಾತಿಯನ್ನು ವಿಳಂಬಗೊಳಿಸುವ ಸಾಧ್ಯತೆಯ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಪ್ರವಾಸೋದ್ಯಮ, ಹೋಂಸ್ಟೇ, ರೆಸಾರ್ಟ್, ಕೃಷಿ ಆಧಾರಿತ ಸಂಸ್ಕರಣಾ ಘಟಕಗಳು ಹಾಗೂ ಸಣ್ಣ ಕೈಗಾರಿಕೆಗಳಿಗೆ ಹೆಚ್ಚುವರಿ ಅನುಮತಿಗಳ ಅಗತ್ಯ ಉಂಟಾಗುವ ಸಾಧ್ಯತೆಯಿದೆ. ಸಾಮಾನ್ಯ ಜನರು ಮನೆ ನಿರ್ಮಾಣ ಅಥವಾ ಸಣ್ಣ ಅಭಿವೃದ್ಧಿ ಕಾಮಗಾರಿಗಳಿಗೆ ಹಲವು ಇಲಾಖೆಗಳ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದೆಂಬ ಭಯವೂ ವ್ಯಕ್ತವಾಗಿದೆ.
ಮಲೆನಾಡಿನ ಜನರ ಪರವಾಗಿ ಜನಪ್ರತಿನಿಧಿಗಳು, ಶಾಸಕರು, ಸಂಸದರು ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕೆಂಬ ಆಗ್ರಹ ಇದೀಗ ಬಲವಾಗಿ ಕೇಳಿಬರುತ್ತಿದೆ. ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕರ ಬದುಕಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಜನಪ್ರತಿನಿಧಿಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ರೈತರು ಅಭಿಪ್ರಾಯಪಡುತ್ತಿದ್ದಾರೆ.
ಕೇವಲ ರಾಜಕೀಯ ಹೇಳಿಕೆಗಳಿಗೆ ಸೀಮಿತವಾಗದೇ, ಗ್ರಾಮ ಮಟ್ಟದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ, ರೈತರು ಮತ್ತು ಸ್ಥಳೀಯ ನಿವಾಸಿಗಳ ಆತಂಕಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಕಾರ್ಯವನ್ನು ಜನಪ್ರತಿನಿಧಿಗಳು ಕೈಗೊಳ್ಳಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.
ರಾಜ್ಯದ ಎಲ್ಲ ಪಕ್ಷಗಳ ಶಾಸಕರು ಮತ್ತು ಸಂಸದರು ಪಕ್ಷಭೇದ ಮರೆತು ಮಲೆನಾಡಿನ ಹಿತಾಸಕ್ತಿಗಾಗಿ ಒಗ್ಗಟ್ಟಾಗಿ ಧ್ವನಿ ಎತ್ತಬೇಕು. ಕೃಷಿ ಭೂಮಿ, ಜನವಸತಿ ಪ್ರದೇಶಗಳು, ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳಿಗೆ ಯಾವುದೇ ತೊಂದರೆ ಆಗದಂತೆ ಅಂತಿಮ ಅಧಿಸೂಚನೆಯಲ್ಲಿ ಸ್ಪಷ್ಟ ರಕ್ಷಣೆ ಒದಗಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ.
ಅರಣ್ಯ ಹಕ್ಕುಗಳ ಕಾಯ್ದೆ-2006ರ ಪ್ರಕಾರ ಸ್ಥಳೀಯ ಸಮುದಾಯಗಳ ಅಭಿಪ್ರಾಯವನ್ನು ಪರಿಗಣಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಗ್ರಾಮಸಭೆಗಳು ತಮ್ಮ ವ್ಯಾಪ್ತಿಯ ಕೃಷಿ ಭೂಮಿ, ಜನವಸತಿ ಪ್ರದೇಶಗಳು, ಸಾರ್ವಜನಿಕ ಸೌಲಭ್ಯಗಳು ಹಾಗೂ ಭವಿಷ್ಯದ ಅಭಿವೃದ್ಧಿ ಅಗತ್ಯಗಳ ಕುರಿತು ಸ್ಪಷ್ಟ ಅಭಿಪ್ರಾಯ ದಾಖಲಿಸುವುದು ಅತ್ಯಂತ ಮಹತ್ವದ್ದಾಗಿದೆ.
ಕರಡು ಅಧಿಸೂಚನೆಯಲ್ಲಿನ ಅಂಶಗಳನ್ನು ಗ್ರಾಮ ಮಟ್ಟದಲ್ಲಿ ಸಮಗ್ರವಾಗಿ ಚರ್ಚಿಸಿ, ಅಗತ್ಯ ತಿದ್ದುಪಡಿಗಳನ್ನು ಸೂಚಿಸುವ ಅವಕಾಶವನ್ನು ಸ್ಥಳೀಯರು ಬಳಸಿಕೊಳ್ಳಬೇಕು. ರೈತ ಸಂಘಟನೆಗಳು, ಗ್ರಾಮ ಪಂಚಾಯಿತಿಗಳು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳು ಈ ಕುರಿತು ಜನಜಾಗೃತಿ ಮೂಡಿಸುವ ಅಗತ್ಯವಿದೆ.
ಇದು ಇನ್ನೂ ಕರಡು ಅಧಿಸೂಚನೆಯಾಗಿರುವುದರಿಂದ ಸಾರ್ವಜನಿಕರಿಗೆ ತಮ್ಮ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಲು ಅವಕಾಶವಿದೆ. ಅಧಿಸೂಚನೆ ಪ್ರಕಟವಾದ ದಿನಾಂಕದಿAದ 60 ದಿನಗಳೊಳಗೆ ಕೇಂದ್ರ ಸರ್ಕಾರಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸಬಹುದು.
ಸ್ಥಳೀಯರು ತಮ್ಮ ಗ್ರಾಮದ ಹೆಸರು, ಸರ್ವೆ ಸಂಖ್ಯೆ, ಜನವಸತಿ ಪ್ರದೇಶ, ಕೃಷಿ ಭೂಮಿ ಹಾಗೂ ಸಾರ್ವಜನಿಕ ಸೌಲಭ್ಯಗಳ ವಿವರಗಳನ್ನು ಉಲ್ಲೇಖಿಸಿ ಮನವಿ ಸಲ್ಲಿಸಬಹುದು. ಗ್ರಾಮಸಭೆ, ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಮೂಲಕವೂ ಒಟ್ಟುಗೂಡಿದ ಮನವಿಯನ್ನು ಸರ್ಕಾರಕ್ಕೆ ಕಳುಹಿಸಲು ಅವಕಾಶವಿದೆ.
ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಗತ್ಯವಾದ ವಿಚಾರ. ಈ ಪರ್ವತ ಶ್ರೇಣಿಯು ದಕ್ಷಿಣ ಭಾರತದ ಜಲಮೂಲಗಳ ಜೀವನಾಡಿಯಾಗಿದ್ದು, ಲಕ್ಷಾಂತರ ಜನರ ಬದುಕಿಗೆ ಆಧಾರವಾಗಿದೆ. ಪರಿಸರ ಸಂರಕ್ಷಣೆ ಅನಿವಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ.
ಆದರೆ ತಲೆಮಾರುಗಳಿಂದ ಕೃಷಿ, ತೋಟಗಾರಿಕೆ ಹಾಗೂ ಗ್ರಾಮೀಣ ಆರ್ಥಿಕ ಚಟುವಟಿಕೆಗಳನ್ನು ಅವಲಂಬಿಸಿ ಬದುಕುತ್ತಿರುವ ಮಲೆನಾಡಿನ ಜನರ ಹಕ್ಕುಗಳು ಮತ್ತು ಜೀವನೋಪಾಯವೂ ಸಮಾನವಾಗಿ ಮಹತ್ವದ್ದಾಗಿದೆ. ಆದ್ದರಿಂದ ಅಂತಿಮ ಅಧಿಸೂಚನೆ ಹೊರಬರುವ ಮೊದಲು ಸರ್ಕಾರವು ಕೇವಲ ಉಪಗ್ರಹ ಚಿತ್ರಗಳು ಮತ್ತು ಕಚೇರಿ ದಾಖಲೆಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳದೆ, ಗ್ರಾಮಸಭೆಗಳ ಅಭಿಪ್ರಾಯವನ್ನು ಆಲಿಸಿ, ಕೃಷಿ ಹಾಗೂ ಜನವಸತಿ ಪ್ರದೇಶಗಳಿಗೆ ಸ್ಪಷ್ಟ ಮತ್ತು ಶಾಶ್ವತ ರಕ್ಷಣೆ ಒದಗಿಸಬೇಕಾಗಿದೆ.
ಪರಿಸರ ಸಂರಕ್ಷಣೆ ಮತ್ತು ಜನಜೀವನದ ರಕ್ಷಣೆ ಎರಡನ್ನೂ ಸಮಾನವಾಗಿ ಪರಿಗಣಿಸಿದಾಗ ಮಾತ್ರ ಈ ಅಧಿಸೂಚನೆ ಯಶಸ್ವಿಯಾಗಲಿದೆ. ಇಲ್ಲವಾದಲ್ಲಿ ಪರಿಸರ ಉಳಿಸುವ ಹೆಸರಿನಲ್ಲಿ ಮಲೆನಾಡಿನ ಜನರ ಬದುಕು ಸಂಕಷ್ಟಕ್ಕೆ ಸಿಲುಕುವ ಭೀತಿ ಮುಂದುವರಿಯಲಿದೆ.
