
ಕಳಸ ಲೈವ್ ವರದಿ
ಸಂಸೆಯ ಪ್ರತಿಷ್ಠಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ (ಎಸ್ಡಿಎಂ ಐಟಿಐ)ಯಲ್ಲಿ 35ನೇ ಬ್ಯಾಚ್ನ ನೂತನ ತರಬೇತಿದಾರರ ದಿಕ್ಸೂಚಿ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಂಸೆ ತ್ರೈರತ್ನ ಭವನದ ವ್ಯವಸ್ಥಾಪಕರಾದ ಪ್ರಕಾಶ್ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಂಸ್ಥೆಯ ಹಿರಿಯ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ, ಮಾಸ್ಟರ್ ಟೆಕ್ನಿಷಿಯನ್ಗಳಾದ ಚಂದ್ರಶೇಖರ್ ಹಾಗೂ ಮಂಜಣ್ಣ ಮತ್ತು ಮೂಡಿಗೆರೆಯ ಸಾಮಾಜಿಕ ಹೋರಾಟಗಾರ ಅರುಣ್ ಬಿನ್ನಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಚ್ಎಎಲ್ನ ಹಿರಿಯ ತಾಂತ್ರಿಕ ತಜ್ಞರು ನೂತನ ತರಬೇತಿದಾರರನ್ನು ಉದ್ದೇಶಿಸಿ ಮಾತನಾಡಿ, ಪ್ರಸ್ತುತ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುತ್ತಿರುವ ಇಂಡಸ್ಟ್ರಿ 4.0, ಆಧುನಿಕ ಆಟೊಮೇಷನ್ ಹಾಗೂ ಜಾಗತಿಕ ಮಟ್ಟದ ಹೊಸ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಿದರು. ಐಟಿಐ ಶಿಕ್ಷಣದ ಬಳಿಕ ಲಭ್ಯವಿರುವ ಉದ್ಯೋಗಾವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ವೃತ್ತಿ ಬದುಕನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದೇ ವೇಳೆ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ನೂತನವಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಸಂಸ್ಥೆಯ ಶಿಸ್ತು, ಒಗ್ಗಟ್ಟು ಹಾಗೂ ತರಬೇತಿ ಅವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಮತ್ತು ತಮ್ಮ ಅನುಭವಗಳನ್ನು ಹಂಚಿಕೊAಡರು.
ಸAಸ್ಥೆಯ ಪ್ರಾಂಶುಪಾಲರಾದ ಸತೀಶ್ ಹಾಗೂ ತರಬೇತಿ ಅಧಿಕಾರಿಯಾದ ಗುರುದತ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸನ್ಮಾನಿಸಿ, 35ನೇ ಬ್ಯಾಚ್ನ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಹಾದಿಯಲ್ಲಿ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
