
ಕಳಸ ಲೈವ್ ವರದಿ
ಕಳಸ ಪಟ್ಟಣದ ಕೈಮರದ ಬಳಿ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭವಾಗಿ ಕೆಲವೇ ದಿನಗಳಾಗಿದ್ದು, ಕಾಂಕ್ರೀಟ್ ಹಾಕಿದ ಎರಡೇ ದಿನಕ್ಕೆ ವಾಹನ ಸಂಚಾರ ಆರಂಭವಾಗಿರುವುದು ಕಾಮಗಾರಿಯ ಗುಣಮಟ್ಟ ಬಗ್ಗೆ ಸಾರ್ವಜನಿಕರಲ್ಲಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ರಸ್ತೆಯಲ್ಲಿ ಹಂತ ಹಂತವಾಗಿ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದೆ. ಕಾಂಕ್ರೀಟ್ ಹಾಕಿದ ಬಳಿಕ ಕಾಂಕ್ರೀಟ್ ಹಾಕಿದ ಸ್ಥಳದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರೂ ಅವುಗಳನ್ನು ಲೆಕ್ಕಿಸದೆ ಸ್ಥಳಿಯರು ಸೇರಿದಂತೆ ಪ್ರವಾಸಿಗರು ವಾಹನಗಳು ಸಂಚರಿಸುತ್ತಿರುವುದು ಕಂಡುಬರುತ್ತಿದೆ. ಇದನ್ನು ಪ್ರಶ್ನಿಸುವ ಸಾರ್ವಜನಿಕರ ವಿರುದ್ಧವೇ ಕೆಲವರು ತಿರುಗಿಬೀಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗುರುವಾರ ಹಾಕಲಾಗಿದ್ದ ಕಾಂಕ್ರೀಟ್ ರಸ್ತೆಯ ಮೇಲೆ ಅನಿವಾರ್ಯವಾಗಿ ಶುಕ್ರವಾರವೇ ವಾಹನಗಳು ಸಂಚರಿಸುವAತಾಗಿದೆ. ಹೊಸದಾಗಿ ಹಾಕಿದ ಕಾಂಕ್ರೀಟ್ಗೆ ಅಗತ್ಯವಾದ ಕ್ಯೂರಿಂಗ್ ಅವಧಿ ಹಾಗೂ ಸಂಚಾರ ನಿರ್ಬಂಧ ಪಾಲನೆಯಾಗದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ಬಿರುಕು, ಮೇಲ್ಮೈ ಹಾನಿ ಸೇರಿದಂತೆ ಗುಣಮಟ್ಟದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂಬ ಆತಂಕ ಸಾರ್ವಜನಿಕರಲ್ಲಿದೆ.
ಇದೇ ವೇಳೆ ಶುಕ್ರವಾರ ಇದೇ ಪ್ರದೇಶದಲ್ಲಿ ಖಾಸಗಿ ಬಸ್ಸೊಂದು ಮಣ್ಣಿನಲ್ಲಿ ಹುದುಗಿ ಹೋಗಿ, ಬಳಿಕ ಕ್ರೇನ್ ಮೂಲಕ ಹೊರತೆಗೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ಸೂಕ್ತವಾದ ವ್ಯವಸ್ಥೆಯನ್ನು ಸಂಬ0ಧಪಟ್ಟವರು ಮಾಡಲು ವಿಫಲರಾಗಿರುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ಆರಂಭದಲ್ಲೇ ಇಂತಹ ಅವ್ಯವಸ್ಥೆಗೆ ಒಳಗಾದರೆ, ಕಾಮಗಾರಿ ಪೂರ್ಣಗೊಂಡ ಬಳಿಕ ಅದರ ಗುಣಮಟ್ಟ ಮತ್ತು ಬಾಳಿಕೆ ಹೇಗಿರಬಹುದು ಎಂಬ ಆತಂಕ ಸಹಜವಾಗಿದೆ. ಕಾಮಗಾರಿ ಹೆಸರಿನಲ್ಲಿ ಹಣ ಖರ್ಚು ಮಾಡುವುದಷ್ಟೇ ಸಾಕಾಗುವುದಿಲ್ಲ; ಗುಣಮಟ್ಟದ ಕಾಮಗಾರಿ ಹಾಗೂ ಅದರ ಮೇಲ್ವಿಚಾರಣೆಯೂ ಅಷ್ಟೇ ಮುಖ್ಯ. ಇಲ್ಲವಾದರೆ ಕೆಲವೇ ವರ್ಷಗಳಲ್ಲಿ ರಸ್ತೆ ಹಾಳಾಗಿ ಮತ್ತೆ ಸಾರ್ವಜನಿಕರ ಹಣದಲ್ಲೇ ದುರಸ್ತಿ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ಸಾರ್ವಜನಿಕರದ್ದು.
