
ಕಳಸದಲ್ಲಿ ಪುಟ್ ಪಾತ್ ಅತಿಕ್ರಮಣಕ್ಕೆ ಪಂಚಾಯಿತಿ ಬ್ರೇಕ್
Kalasa live
ಕಳಸ ಲೈವ್ ವರದಿ
ಸಾರ್ವಜನಿಕರು ಸುರಕ್ಷಿತವಾಗಿ ನಡೆದುಕೊಂಡು ಹೋಗಲು ನಿರ್ಮಿಸಿರುವ ಫುಟ್ಪಾತ್ಗಳನ್ನೇ ಅಂಗಡಿಗಳ ವಿಸ್ತರಣೆ, ಜಾಹೀರಾತು ಬೋರ್ಡ್ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಬಳಸುತ್ತಿದ್ದವರ ವಿರುದ್ಧ ಕಳಸ ಗ್ರಾಮ ಪಂಚಾಯಿತಿ ಕೊನೆಗೂ ಕಠಿಣ ಕ್ರಮಕ್ಕೆ ಮುಂದಾಗಿದೆ.
ಕಳಸ ಪಟ್ಟಣದ ಪ್ರಮುಖ ರಸ್ತೆಗಳ ಫುಟ್ಪಾತ್ಗಳನ್ನು ಅತಿಕ್ರಮಿಸಿ ಬೋರ್ಡ್ಗಳನ್ನು ಅಳವಡಿಸುವುದು, ಸರಕು-ಸಾಮಗ್ರಿಗಳನ್ನು ಇಡುವುದು ಹಾಗೂ ತಾತ್ಕಾಲಿಕ ವ್ಯಾಪಾರ ನಡೆಸುತ್ತಿರುವವರ ವಿರುದ್ಧ ಮಂಗಳವಾರ ಪಂಚಾಯಿತಿ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು.
ವಾರಾಂತ್ಯದಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಕಳಸ ಪಟ್ಟಣದಲ್ಲಿ ರಸ್ತೆ ಮೇಲೆ ಸಂಚರಿಸುವುದೇ ಸವಾಲಾಗಿರುವ ಪರಿಸ್ಥಿತಿ ಇದೆ. ಇದರ ನಡುವೆ ಸಾರ್ವಜನಿಕರಿಗಾಗಿ ಮೀಸಲಾದ ಫುಟ್ಪಾತ್ಗಳೂ ವ್ಯಾಪಾರಿಗಳ ಪಾಲಾಗಿದ್ದರಿಂದ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಅಪಘಾತದ ಆತಂಕವೂ ಎದುರಾಗಿತ್ತು.

ಫುಟ್ಪಾತ್ಗಳಲ್ಲಿ ಬೃಹತ್ ಜಾಹೀರಾತು ಫಲಕಗಳನ್ನು ನಿಲ್ಲಿಸುವುದು, ಅಂಗಡಿ ಸಾಮಗ್ರಿಗಳನ್ನು ಹೊರಗಡೆ ಇಡುವುದು, ತಾತ್ಕಾಲಿಕ ಅಂಗಡಿಗಳನ್ನು ನಿರ್ಮಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಸಾರ್ವಜನಿಕ ಜಾಗವನ್ನು ಅತಿಕ್ರಮಿಸಲಾಗುತ್ತಿತ್ತು. ಈ ಬಗ್ಗೆ ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿಗೆ ಹಲವು ದೂರುಗಳು ಬಂದಿದ್ದಲ್ಲದೆ, ಸಾರ್ವಜನಿಕ ವಲಯದಲ್ಲಿಯೂ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಪಿಡಿಒ ಕವೀಶ್ ನೇತೃತ್ವದಲ್ಲಿ ಪಂಚಾಯಿತಿ ಸಿಬ್ಬಂದಿ ಮಂಗಳವಾರ ಫುಟ್ಪಾತ್ ತೆರವು ಕಾರ್ಯಾಚರಣೆ ನಡೆಸಿದರು. ರಸ್ತೆ ಬದಿಯ ಅಂಗಡಿ ಮಾಲೀಕರಿಗೆ ಸ್ಥಳದಲ್ಲೇ ಸೂಚನೆ ನೀಡಿ, ಫುಟ್ಪಾತ್ನಲ್ಲಿ ಇಡಲಾಗಿದ್ದ ಕೆಲವು ಸಾಮಗ್ರಿಗಳನ್ನು ಪಂಚಾಯಿತಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡರು.

ಈ ಕುರಿತು ಮಾತನಾಡಿದ ಪಿಡಿಒ ಕವೀಶ್, ಫುಟ್ಪಾತ್ ಸಾರ್ವಜನಿಕರು ನಡೆದುಕೊಂಡು ಹೋಗಲು ಇರುವ ಜಾಗ. ಅಲ್ಲಿ ಬೋರ್ಡ್ ಇಡುವುದಾಗಲಿ, ವ್ಯಾಪಾರ ಮಾಡುವುದಾಗಲಿ ಸಹಿಸುವುದಿಲ್ಲ. ಫುಟ್ಪಾತ್ ಮೇಲೆ ಯಾವುದೇ ವಸ್ತು ಕಂಡುಬ0ದರೂ ಪಂಚಾಯಿತಿಯಿ0ದ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ” ಎಂದು ಖಡಕ್ ಎಚ್ಚರಿಕೆ ನೀಡಿದರು.
ಇಂದು ರಸ್ತೆ ಬದಿಯ ಅಂಗಡಿ ಮಾಲೀಕರಿಗೆ ಖುದ್ದಾಗಿ ತೆರಳಿ ಸೂಚನೆ ನೀಡಲಾಗಿದೆ. ಕೆಲವು ಕಡೆ ಫುಟ್ಪಾತ್ನಲ್ಲಿ ಇಡಲಾಗಿದ್ದ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನಾಳೆಯಿಂದ ಪ್ರತಿದಿನ ಕಸದ ವಾಹನ ತೆರಳುವ ವೇಳೆ ಫುಟ್ಪಾತ್ನಲ್ಲಿ ಸರಕು, ಸಾಮಗ್ರಿ ಅಥವಾ ಬೋರ್ಡ್ಗಳು ಕಂಡುಬ0ದರೆ ಯಾವುದೇ ಮುನ್ಸೂಚನೆ ನೀಡದೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
