
ನವದೆಹಲಿ/ಮೂಡಿಗೆರೆ: ದೆಹಲಿಯಲ್ಲಿ ‘ಆಲಿ ಕ್ಲಬ್’ (Alee Club) ವತಿಯಿಂದ ಆಯೋಜಿಸಲಾಗಿದ್ದ ಪ್ರತಿಷ್ಠಿತ ‘ಮಿಸ್ & ಮಿಸ್ಟರ್ ಟೀನ್ ಇಂಡಿಯಾ 2026’ (Miss & Mr TEEN INDIA 2026) ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಮಲೆನಾಡಿನ ಮೂಡಿಗೆರೆ ತಾಲೂಕಿನ ಸಾಚಿಸ್ಮಯಾ ಬಿ.ಪಿ. ಬಲಿಗೆ ಅವರು ‘ಪ್ರಥಮ ರನ್ನರ್ ಅಪ್’ (First Runner Up) ಆಗಿ ಹೊರಹೊಮ್ಮುವ ಮೂಲಕ ಸಾಧನೆಗೆ ಪಾತ್ರರಾಗಿದ್ದಾರೆ.

ಸೆಪ್ಟೆಂಬರ್ 2ರಂದು ದೆಹಲಿಯಲ್ಲಿ ನಡೆದ ಅಂತಿಮ ಸ್ಪರ್ಧೆಯಲ್ಲಿ ದೇಶದ ನಾನಾ ಭಾಗಗಳಿಂದ ಬಂದಿದ್ದ ಕಠಿಣ ಸ್ಪರ್ಧಿಗಳ ನಡುವೆ ಸಾಚಿಸ್ಮಯಾ ಅವರು ಪ್ರಥಮ ರನ್ನರ್ ಅಪ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸ್ವಯಂ ಶ್ರಮದ ಸಾಧನೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಬಲಿಗೆ ಗ್ರಾಮದ ಕಾಫಿ ಬೆಳೆಗಾರರಾದ ಪ್ರಶಾಂತ್ ಬಲಿಗೆ ಹಾಗೂ ಚೈತ್ರ ದಂಪತಿಯ ಪುತ್ರಿಯಾಗಿರುವ ಸಾಚಿಸ್ಮಯಾ, ಯಾವುದೇ ಬಾಹ್ಯ ತರಬೇತಿಯಿಲ್ಲದೆ ತಮ್ಮ ಸ್ವಂತ ಶ್ರಮದಿಂದ ಈ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದರು. ಆರಂಭಿಕ ಹಂತಗಳನ್ನು ಯಶಸ್ವಿಯಾಗಿ ಪೂರೈಸಿ ಅಂತಿಮವಾಗಿ ರಾಷ್ಟ್ರಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
ಬಹುಮುಖ ಪ್ರತಿಭೆ: ಸಾಚಿಸ್ಮಯಾ ಅವರು ಪ್ರಸ್ತುತ ಬೆಂಗಳೂರಿನ ಹೆಚ್.ಎಸ್.ಆರ್. ಲೇಔಟ್ನ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ 10 ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಾರೆ. ಶಿಕ್ಷಣದ ಜೊತೆಗೆ ಉತ್ತಮ ಭರತನಾಟ್ಯ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಇವರು ಎನ್ಸಿಸಿ (NCC) ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ನಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಮಲೆನಾಡಿನ ಗ್ರಾಮೀಣ ಭಾಗದ ಪ್ರತಿಭೆಯೊಂದು ರಾಷ್ಟ್ರಮಟ್ಟದಲ್ಲಿ ಸಾಧನೆ ಗೈದಿರುವುದಕ್ಕೆ ಸಾಚಿಸ್ಮಯಾ ಅವರ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಮೂಡಿಗೆರೆ ತಾಲೂಕಿನ ಸಾರ್ವಜನಿಕರು ತೀವ್ರ ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ
