
ಕಳಸ ಲೈವ್ ವರದಿ
ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಪ್ರಸಕ್ತ 2025-26ನೇ ಸಾಲಿನಲ್ಲಿ ₹593.63 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ ನಡೆಸಿದ್ದು, ₹1.69 ಕೋಟಿ ಒಟ್ಟು ಲಾಭ ಹಾಗೂ ₹34.62 ಲಕ್ಷ ನಿವ್ವಳ ಲಾಭಗಳಿಸಿ “ಎ” ದರ್ಜೆಯಲ್ಲಿ ಮುಂದುವರಿದಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಜಿ.ಕೆ. ಮಂಜಪ್ಪಯ್ಯ ತಿಳಿಸಿದ್ದಾರೆ.

ಭಾನುವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ವರದಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಂಸ್ಥೆಯು ಕೇವಲ ಲಾಭಗಳಿಸುವುದನ್ನೇ ಉದ್ದೇಶವಾಗಿಟ್ಟುಕೊಳ್ಳದೆ, ದೂರದೃಷ್ಟಿಯಿಂದ ಸ್ಥಿರಾಸ್ತಿಗಳನ್ನು ಹೆಚ್ಚಿಸಲು ಆದ್ಯತೆ ನೀಡಿದೆ ಎಂದರು. ಕಚಗಾನೆಯಲ್ಲಿ ಜಾಗ ಖರೀದಿಸಿ ಸುಸಜ್ಜಿತವಾದ ಕಾಫಿ ಹಾಗೂ ಅಡಿಕೆ ಸಂಸ್ಕರಣಾ ಘಟಕ, ಎಲೆಕ್ಟ್ರಿಕ್ ಡ್ರೈಯರ್ ಮತ್ತು 20 ಸಾವಿರ ಮೂಟೆ ಸಾಮರ್ಥ್ಯದ ಗೋದಾಮು ನಿರ್ಮಿಸಲಾಗಿದೆ. ಕಳಸ ಹಾಗೂ ಬಾಳೆಹೊಳೆಯಲ್ಲಿ ಸ್ವಂತ ಕಟ್ಟಡಗಳನ್ನು ಹೊಂದಿದ್ದು, ಸಂಘದ ಪ್ರಸ್ತುತ ಸ್ಥಿರಾಸ್ತಿ ಮೌಲ್ಯ ಸುಮಾರು ₹21 ಕೋಟಿ ದಾಟಿದೆ. ಸಂಘದಲ್ಲಿ 3,522 ಸದಸ್ಯರಿದ್ದು, ಶೇರು ಬಂಡವಾಳ ₹1.33 ಕೋಟಿ ಹಾಗೂ ಇತರ ನಿಧಿಗಳು ₹11.21 ಕೋಟಿ ಹೊಂದಿವೆ. ಒಟ್ಟು ₹68.15 ಕೋಟಿ ಠೇವಣಿ ಹೊಂದಿದ್ದು, ದುಡಿಯುವ ಬಂಡವಾಳ ₹104.40 ಕೋಟಿ ತಲುಪಿದೆ. ಸಂಘವು 7 ಮಾರಾಟ ಶಾಖೆಗಳನ್ನು ಹೊಂದಿದ್ದು, ₹13.04 ಕೋಟಿ ಮೌಲ್ಯದ ಸಾಮಗ್ರಿಗಳನ್ನು ಖರೀದಿಸಿ ₹12.45 ಕೋಟಿ ಮೌಲ್ಯದ ಸರಕುಗಳನ್ನು ಮಾರಾಟ ಮಾಡಿದೆ. ಇದರಿಂದ ₹75.87 ಲಕ್ಷ ವ್ಯಾಪಾರ ಲಾಭ ಬಂದಿದೆ.
ಸ0ಸ್ಥೆಯು ಕೃಷಿಕರಿಗೆ ಹಾಗೂ ಸದಸ್ಯರಿಗೆ ನೀಡುತ್ತಿರುವ ಅತ್ಯುತ್ತಮ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ನೀಡುವ “ಸಹಕಾರ ರತ್ನ” ಹಾಗೂ ಎನ್.ಸಿ.ಡಿ.ಸಿ. ಸಂಸ್ಥೆ ನೀಡುವ “ಸಹಕಾರ ಶಿರೋಮಣಿ” ರಾಜ್ಯಮಟ್ಟದ ಪ್ರಶಸ್ತಿಗಳು ಲಭಿಸಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ 90ಕ್ಕಿಂದ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ದುಡಿದು ನಿವೃತಿ ಹೊಂದಿದ ಕೆ.ಎನ್.ರವಿರಾಜ್ ಹಾಗೂ ಅಣ್ಣು ಅವರನ್ನು ಗೌರವಿಸಲಾಯಿತು.ಹಾಗೆಯೆ ಕಳಸ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂಬತ್ತು ವರ್ಷಗಳ ಕಾಲ ಪ್ರಾಂಶುಪಾಲರಾಗಿ ಕರ್ತವ್ಯ ಸಲ್ಲಿಸಿ ವರ್ಗಾವಣೆಗೊಂಡ ವಿನಯ ಕುಮಾರ್ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾದ್ಯಕ್ಷೆ ಆಶಾಲತಾ ಡಿ.ಜೈನ್, ನಿರ್ದೇಶಕರಾದ ಅನಿಲ್ ಡಿಸೋಜ, ನಾರಾಯಣ, ಜಗದೀಶ್ ಗೌಡ, ಮಹೇಶ್ ಕೆ.ಸಿ., ದೇಜಪ್ಪ, ಮಧುವನ್ ಜೈನ್, ರತಿ, ಕೃಷ್ಣಪ್ಪ ಕೆ.ಎಸ್, ಗಾಯತ್ರಿ, ರಾಜೇಂದ್ರ ಡಿಸಿಸಿ ಬ್ಯಾಂಕ್ ಮೇಲ್ವಿಚಾರ ಪ್ರಯಾಗ್, ಭ್ಯಾಂಕ್ ಮುಖ್ಯ ಕಾರ್ಯನಿರ್ವಹಕ ಪಿ.ಮಹಬಲೇಶ್ವರ ಇದ್ದರು.
