ಕಳಸ ಲೈವ್ ವರದಿ
“ನಮ್ಮ ಪ್ರಕೃತಿ, ನಮ್ಮ ಉಸಿರು” ಎಂಬ ಅತ್ಯುನ್ನತ ಧ್ಯೇಯವಾಕ್ಯದೊಂದಿಗೆ ಕಳಸದ ‘ವಿ ಫಿಟ್ ಅಕಾಡೇಮಿ’ಯ ವಿದ್ಯಾರ್ಥಿಗಳು ಭಾನುವಾರ ಪಟ್ಟಣದ ಪ್ರಮುಖ ಸಾರ್ವಜನಿಕ ಸ್ಥಳಗಳಾದ ದುಗ್ಗಪ್ಪನ ಕಟ್ಟೆ ಹಾಗೂ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.
ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಬಗ್ಗೆ ಮಾಹಿತಿ ನೀಡಲು ವಿದ್ಯಾರ್ಥಿಗಳನ್ನು ದುಗ್ಗಪ್ಪನ ಕಟ್ಟೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಅಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರು ಬಿಸಾಡಿದ್ದ ಖಾಲಿ ಬಾಟಲಿಗಳು, ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸವನ್ನು ನೋಡಿ ವಿದ್ಯಾರ್ಥಿಗಳು ಸ್ವಚ್ಚತಾ ಕಾರ್ಯಕ್ಕೆ ಇಳಿದಿದ್ದರು. ಓದಿ ಬುದ್ಧಿವಂತರಾದವರೇ ಬಾಟಲಿ-ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಪರಿಸರ ಹಾಳುಗೆಡವುತ್ತಿರುವುದು ಖೇದಕರ. ಆದರೆ, ಅಂತಹ ತಪ್ಪುಗಳನ್ನು ತಿದ್ದಿ ಮುಂದಿನ ಪೀಳಿಗೆಯನ್ನು ಪ್ರತಿನಿಧಿಸುವ ಈ ಸಣ್ಣ ಮಕ್ಕಳು ಪರಿಸರ ನೈರ್ಮಲ್ಯಕ್ಕೆ ಮುಂದಾಗಿರುವುದು ಸಮಾಜದ ಕಣ್ಣು ತೆರೆಸುವಂತಿತ್ತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರಬೋಧಿನಿ ವಿದ್ಯಾಕೇಂದ್ರದ ಮುಖ್ಯ ಶಿಕ್ಷಕರಾದ ಆನಂದ್ ಅವರು ಮಾತನಾಡಿ, “ವಿದ್ಯಾರ್ಥಿಗಳಿಗೆ ಕೇವಲ ಅಕ್ಷರ ಕಲಿಯುವುದಷ್ಟೇ ಪೂರ್ಣ ಶಿಕ್ಷಣವಲ್ಲ; ಅದರೊಂದಿಗೆ ಪರಿಸರವನ್ನು ಕಾಪಾಡುವ ಪ್ರಜ್ಞೆಯೂ ಇರಬೇಕು. ಸಾರ್ವಜನಿಕ ಸ್ಥಳಗಳಿಗೆ ಹೋದಾಗ ನಾವು ತೋರಿಸುವ ಶಿಸ್ತು ಮತ್ತು ಕಾಳಜಿ ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ,” ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಕರಾಟೆ ತರಬೇತಿಯು ದೇಹವನ್ನು ದೃಢಗೊಳಿಸಿ, ಆತ್ಮರಕ್ಷಣೆ ಮತ್ತು ಆರೋಗ್ಯಕ್ಕೆ ಹೇಗೆ ಸಹಕಾರಿಯೋ, ಹಾಗೆಯೇ ಪರಿಸರ ನೈರ್ಮಲ್ಯವೂ ಪ್ರತಿಯೊಬ್ಬರ ಜೀವನದ ಮುಖ್ಯ ಭಾಗವಾಗಬೇಕು ಎಂಬುದನ್ನು ವಿ ಫಿಟ್ ಅಕಾಡೇಮಿಯ ವಿದ್ಯಾರ್ಥಿಗಳು ತಮ್ಮ ಈ ಕಾಯಕದ ಮೂಲಕ ಸಮಾಜಕ್ಕೆ ಗಟ್ಟಿಯಾಗಿ ಸಾರಿದ್ದಾರೆ.
