
ಕಳಸ ಲೈವ್ ವರದಿ
ಕಳಸ ಜೆಸಿಐ ಸಪ್ತಾಹದ 2ನೇ ದಿನದ ಅಂಗವಾಗಿ ಜೆಸಿಐ ಕಳಸ ಘಟಕದ ವತಿಯಿಂದ ಸಂಸೆ ಎಸ್.ಡಿ.ಎಂ. ಐಟಿಐ ಕಾಲೇಜಿನಲ್ಲಿ ಯುವ ನಾಯಕತ್ವ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ವಲಯ ತರಬೇತುದಾರರಾದ ಪ್ರಶಾಂತ್ ಹೆಚ್.ಆರ್. ಅವರು ಯುವಕರು ಕೇವಲ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವವರಲ್ಲ, ಸಮಾಜದ ಭವಿಷ್ಯವನ್ನು ರೂಪಿಸುವ ಶಕ್ತಿಯೂ ಹೌದು. ನಾಯಕತ್ವ ಎನ್ನುವುದು ಕೇವಲ ಅಧಿಕಾರ ಅಥವಾ ಸ್ಥಾನಮಾನವಲ್ಲ; ಜವಾಬ್ದಾರಿ, ಆತ್ಮವಿಶ್ವಾಸ, ಉತ್ತಮ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಇತರರನ್ನು ಮುನ್ನಡೆಸುವ ಗುಣವೇ ನಿಜವಾದ ನಾಯಕತ್ವ. ಪ್ರತಿಯೊಬ್ಬ ಯುವಕರು ತನ್ನ ಸಾಮರ್ಥ್ಯವನ್ನು ಅರಿತು, ಸಮಯವನ್ನು ಸದುಪಯೋಗಪಡಿಸಿಕೊಂಡು, ಉತ್ತಮ ಗುರಿಯನ್ನು ಹೊಂದಿ ಮುನ್ನಡೆಯಬೇಕು. ಇಂದಿನ ಯುವಕರ ಸಕಾರಾತ್ಮಕ ಚಿಂತನೆ ಮತ್ತು ಕ್ರಿಯಾಶೀಲತೆಯೇ ನಾಳಿನ ಸಮಾಜದ ಅಭಿವೃದ್ಧಿಗೆ ಬುನಾದಿಯಾಗಲಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜೆಸಿಐ ಕಳಸ ಘಟಕದ ಅಧ್ಯಕ್ಷರಾದ ಜೆಸಿ ತನ್ವಿರ್ ಅವರು, ಯುವಕರು ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡುವ ಅಪಾರ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಆ ಸಾಮರ್ಥ್ಯವನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳಲು ಆತ್ಮವಿಶ್ವಾಸ, ಶಿಸ್ತು, ಸಮಯದ ಸದುಪಯೋಗ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಅವಕಾಶಗಳು ಎಲ್ಲರಿಗೂ ಬರುತ್ತವೆ, ಆದರೆ ಅವುಗಳನ್ನು ಗುರುತಿಸಿ ಸದುಪಯೋಗಪಡಿಸಿಕೊಳ್ಳುವವರು ಮಾತ್ರ ಯಶಸ್ಸಿನತ್ತ ಸಾಗುತ್ತಾರೆ. ಇಂದಿನ ವಿದ್ಯಾರ್ಥಿಗಳು ಕೇವಲ ಉದ್ಯೋಗ ಪಡೆಯುವ ಗುರಿಯನ್ನು ಹೊಂದದೆ, ತಮ್ಮನ್ನು ತಾವು ಬೆಳೆಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವ ಉತ್ತಮ ನಾಯಕರಾಗಬೇಕು. ಯುವಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡರೆ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಟಿಐ ಕಾಲೇಜು ಪ್ರಾಂಶುಪಾಲ ಸತೀಶ್, ಶಿಕ್ಷಕ ಗುರುದತ್, ಕಳಸ ಜೆಸಿಐ ಘಟಕದ ಕಾರ್ಯದರ್ಶಿ ಜಯಪ್ರಕಾಶ್, ಉಪಾಧ್ಯಕ್ಷರಾದ ಸತೀಶ್, ಐಟಿಐ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
