ಕಳಸ ಲೈವ್ ವರದಿ
ಕಳಸ ತಾಲೂಕಿನಲ್ಲಿರುವ ಎರಡು ಕಾಡಾನೆಗಳು ಸೇರಿದಂತೆ ಒಟ್ಟು ಐದು ಆನೆಗಳನ್ನು ಹಿಡಿಯಲು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು ಅದಕ್ಕೆ ಸ್ಪಂದಿಸಿರುವ ಬಸವರಾಜ ಬೊಮ್ಮಾಯಿ ಅರಣ್ಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಯವರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಮಂಗಳವಾರ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ.

ಕಳಸ ತಾಲೂಕು ವ್ಯಾಪ್ತಿಯಲ್ಲಿ 2 ಕಾಡಾನೆಗಳು ಮತ್ತು ಮೂಡಿಗೆರೆ ತಾಲ್ಲೂಕಿನ ಕುಂದೂರು ಹಾಗೂ ಊರುಬಗೆ ವ್ಯಾಪ್ತಿಯಲ್ಲಿ 3 ಕಾಡಾನೆಗಳು ಒಟ್ಟು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನರಿಗೆ ತುಂಬಾ ತೊಂದರೆ ಕೊಡುತ್ತಾ ಹಾವಳಿ ಮಾಡುತ್ತಿರುವ 5 ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಮನವಿ ಮಾಡಿರುತ್ತೇನೆ.

ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಅವರು ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು (ಪಿಸಿಸಿಎಫ್) ಮತ್ತು ಚಿಕ್ಕಮಗಳೂರು ಜಿಲ್ಲಾ ಅರಣ್ಯ ಅಧಿಕಾರಿ(ಸಿಸಿಎಫ್)ಗಳಿಗೆ ಆದೇಶ ನೀಡಿರುತ್ತಾರೆ.

ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಿ ಮುಖ್ಯಮಂತ್ರಿಗಳ ಅದೇಶವನ್ನು ಆದಷ್ಟು ಬೇಗ ಜಾರಿಗೆ ತರಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.


