ಕಳಸ ಲೈವ್ ವರದಿ
ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಪ್ರಸ್ತುತ ಸ್ಥಿತಿಯಲ್ಲಿ ನೈತಿಕ ಶಿಕ್ಷಣವೂ ಪಠ್ಯದ ಭಾಗವಾಗುವುದು ಸಾಮಾಜದ ಹಿತದೃಷ್ಟಿಯಿಂದ ಅತಿ ಅಗತ್ಯವಾಗಿದೆ ಎಂದು ತಾಲ್ಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ರಾಜೇಂದ್ರ ಹೆಬ್ಬಾರ್ ಹಿತ್ಲುಮಕ್ಕಿ ಅಭಿಪ್ರಾಯಪಟ್ಟರು.

ಸಂಸೆಯ ಕೇಂದ್ರ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ವಿಶು ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಪೋಷಕರ ಸಮಿತಿಯ ಅಧ್ಯಕ್ಷ ಅಜಿತ್ ಪ್ರಸಾದ್ ಜೈನ್ ಮಾತನಾಡಿ ಶಿಬಿರದ ಉದ್ದೇಶವನ್ನು ಹೆಚ್ಚು ಅರ್ಥಪೂರ್ಣ ಗೊಳಿಸುವ ಜವಾಬ್ದಾರಿ ಶಿಬಿರಾರ್ಥಿಗಳದ್ದಾಗಿದ್ದು, ಶಿಸ್ತಿನೊಂದಿಗೆ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ ವಹಿಸಿದ್ದರು.ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಒಕ್ಕೂಟದ ಕ್ಷೇತ್ರ ಯೋಜನಾಧಿಕಾರಿ ಸುರೇಶ್, ಕೇಂದ್ರ ವಾಲ್ಮೀಕಿ ಆಶ್ರಮ ಶಾಲೆಯ ಮುಖ್ಯ ಶಿಕ್ಷಕಿ ಹೇಮಲತಾ ಇದ್ದರು.

