ಕಳಸ ಲೈವ್ ವರದಿ
ಜಲಮೂಲಗಳಿಂದ ನೀರನ್ನು ಅನಧಿಕೃತವಾಗಿ ಕೃಷಿ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸಿದ್ದಲ್ಲಿ ಅಂತವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ನೀರನ್ನು ಅನಧಿಕೃತವಾಗಿ ಹೊರತೆಗೆಯಲು ಉಪಯೋಗಿಸುವ ಪಂಪು ಮೋಟಾರ್ ಪೈಪ್ ಅಥವ ಇನ್ಯಾವುದೇ ವಾಹನ ಅಥವ ಉಪಕರಣಗಳನ್ನು ಜಪ್ತಿ ಮಾಡಲಾಗುವುದು ಎಂದು ಕಳಸ ತಹಶೀಲ್ದಾರ್ ಎಂ.ಬಸವರಾಜ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಕಳಸ ತಾಲ್ಲೂಕನ್ನು ಸಾಮಾನ್ಯ ಬರ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿರುತ್ತದೆ. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದೆಂದು ಅಂದಾಜಿಸಲಾಗಿದೆ.ಈ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ವಹಿಸಲಾಗುತ್ತಿದೆ.ಪ್ರಸ್ತುತ ತಾಲ್ಲೂಕಿನ ವಿವಿದೆಡೆ ಜಲಮೂಲಗಳಿಂದ ಅನಧಿಕೃತವಾಗಿ ನೀರನ್ನು ಕೃಷಿ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಬಳಸುತ್ತಿರುವುದು ಕಂಡು ಬಂದಿದ್ದು, ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುವ ಸಾದ್ಯತೆ ಇರುವುದರಿಂದ ಇಂತಹ ಅನಧಿಕೃತ ನೀರು ಬಳಕೆಯನ್ನು ನಿಷೇಧಿಸಿದೆ.

ಅಲ್ಲದೆ ನೀರು ಸರಬರಾಜು ಮಾಡುವ ನೀರುಗಂಟಿಗಳು ನೀರು ಸರಬರಾಜು ಮಾಡಲು ಸಾರ್ವಜನಿಕರಿಗೆ ಹಣದ ಬೇಡಿಕೆ ಇಟ್ಟಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರಬೇಕು.ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಸಾರ್ವಜನಿಕರು ಪ್ರತೀ ದಿನ ಬೆಳಿಗ್ಗೆ 9-00 ರಿಂದ ಸಂಜೆ 7-00 ವರೆಗೆ ತಾಲ್ಲೂಕು ಕಚೇರಿ ಸಹಾಯವಾಣಿ 08263-200722 ಕರೆ ಮಾಡಿ ದೂರು ದಾಖಲಿಸಬಹುದು.

ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಟ್ಯಾಂಕರ್ ಮಾಲಿಕರು ಮಾಲಿಕರು ತಮ್ಮ ಟ್ಯಾಂಕರ್ ಗಳನ್ನು ಕಡ್ಡಾಯವಾಗಿ ತಾಲ್ಲೂಕು ಕಚೇರಿ ಕಳಸ ಇಲ್ಲಿ ಮಾರ್ಚ್ 3ರ ಸಂಜೆ 5-30ರ ಒಳಗೆ ನೋಂದಾಯಿಸಿಕೊಳ್ಳಬೇಕು.ನೋಂದಾಯಿಸದೆ ಇದ್ದಲ್ಲಿ ಟ್ಯಾಂಕರ್ ಗಳನ್ನು ಜಪ್ತಿ ಮಾಡಿ ಮಾಲಿಕರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

