ಕಳಸ ಲೈವ್ ವರದಿ
ಕಳಸ ತಾಲ್ಲೂಕು ಕೇಂದ್ರವಾಗಿ ಘೋಷನೆಯಾಗಿ ಐದು ವರ್ಷಗಳು ಆಗಿದ್ದರೂ ಕೂಡ ಕಳಸದಲ್ಲಿ ತಾಲೂಕು ಪಂಚಾಯಿತಿ ಕಚೇರಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದೀಗ ತಾಲೂಕು ಪಂಚಾಯಿತಿ ಕಚೇರಿ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದ್ದು ಇದೇ ತಿಂಗಳ 25ರ ಮಂಗಳವಾರ ಉದ್ಘಾಟನೆಗೊಳ್ಳಲಿದೆ.
ಈ ಬಗ್ಗೆ ಕಳಸ ಲೈವ್ ಗೆ ಮಾಹಿತಿ ನೀಡಿದ ಮೂಡಿಗೆರೆ ತಾಲೂಕು ಪಂಚಾಯಿತಿ ಇಒ ದಯಾವತಿ ಕಳೆದ ತಿಂಗಳು ಕಚೇರಿ ಉದ್ಘಾಟನೆ ಗೊಳ್ಳಬೇಕಿತ್ತು ನೀತಿ ಸಂಹಿತೆ ಹಿನ್ನಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಈಗ ಕಚೇರಿ ಕಾರ್ಯಾರಂಭ ಮಾಡಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದ್ದು ಇದೇ ತಿಂಗಳ 25 ರಿಂದ ಕಾರ್ಯಾರಂಭಗೊಳ್ಳಲಿದೆ. ವಾರದಲ್ಲಿ ಎರಡು ದಿನ ನಾನೇ ಕಳಸದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಅಲ್ಲದೆ ಮೂಡಿಗೆರೆಯಿಂದ ಇಬ್ಬರು ಸಿಬ್ಬಂದಿಗಳು ಕೂಡ ಇಲ್ಲಿಗೆ ಬಂದು ಕರ್ತವ್ಯ ನಿರ್ವಹಿಸಲಿದ್ದಾರೆ.ಕಳಸ ಅರೆಮನೆಮಕ್ಕಿ ಮಕ್ಕಿ ಮೈದಾನದ ಸಮೀಪ ಇರುವ ಸಮುದಾಯ ಭವನದಲ್ಲಿ ಕಚೇರಿ ಕಾರ್ಯಾರಂಭಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎ.ಶ್ರೇಣಿಕ್ ಮಾತನಾಡಿ ಕಳಸ ತಾಲೂಕು ಪಂಚಾಯಿತಿ ಕಚೇರಿ ಜೂನ್ 25ರಂದು ಉದ್ಘಾಟನೆಗೊಳ್ಳಲಿದ್ದು, ಶಾಸಕಿ ನಯನಾ ಮೋಟಮ್ಮ ಆಗಮಿಸಲಿದ್ದಾರೆ. ಅಲ್ಲದೆ ತಾಲೂಕು ಕೇಂದ್ರದ ವಿವಿಧ ಇಲಾಖೆಗಳು ಕೂಡ ಸಧ್ಯದಲ್ಲಿಯೇ ಕರ್ತವ್ಯ ನಿರ್ವಹಿಸಲಿವೆ ಇದಕ್ಕಾಗಿ ಬಾಡಿಗೆ ಕಟ್ಟಡ ಗೊತ್ತು ಮಾಡುತ್ತಿದ್ದೇವೆ. ತಾಲ್ಲೂಕು ಕಚೇರಿಗೆ ಈಗಾಗಲೇ ಇಬ್ಬರು ಎಸ್ಡಿಎ ಸಿಬ್ಬಂದಿಗಳ ನೇಮಕ ಆಗಿದೆ ಎಂದು ಮಾಹಿತಿ ನೀಡಿದರು.
ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್, ಕಾಂಗ್ರೆಸ್ ಮುಖಂಡರಾದ ವೀರೇಂದ್ರ ಜೈನ್, ಗಣೇಶ್ ಭಟ್, ಸಂಶುದ್ದೀನ್, ಸುದೀರ್ ಇತರರು ಇದ್ದರು.