ಕಳಸ ಲೈವ್ ವರದಿ
ಹೊರನಾಡಿನ ಆದಿಶಕ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ 2026ರ ಏಪ್ರಿಲ್ 20 ರಂದು ಶ್ರೀದೇವಿಯ ವರ್ಧಂತ್ಯುತ್ಸವವು ಅತ್ಯಂತ ಶ್ರದ್ಧಾಭಕ್ತಿಗಳಿಂದ ಜರುಗಲಿದೆ.
1973ರ ಮೇ 5ರಂದು (ಶ್ರೀ ಪ್ರಮಾದಿ ನಾಮ ಸಂವತ್ಸರದ ವೈಶಾಖ ಶುಕ್ಲ ತದಿಗೆ) ಹೊರನಾಡಿನ ನೂತನ ಶಿಲಾಮಯ ದೇವಾಲಯದಲ್ಲಿ ಶ್ರೀ ಆದಿಶಕ್ತಿ ದೇವಿಯ ಪ್ರತಿಷ್ಠೆ ಹಾಗೂ ಶ್ರೀ ಉದ್ಭವ ಗಣಪತಿ ಮತ್ತು ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ಪುನರ್ ಪ್ರತಿಷ್ಠಾಪನೆಯನ್ನು ನೆರವೇರಿಸಲಾಗಿತ್ತು. ಆ ಪುಣ್ಯ ದಿನದ ಸ್ಮರಣಾರ್ಥವಾಗಿ ಪ್ರತಿವರ್ಷ ವರ್ಧಂತ್ಯುತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಶ್ರೀಮತ್ ಪರಾಭವ ನಾಮ ಸಂವತ್ಸರದ ವೈಶಾಖ ಮಾಸದ ಶುಕ್ಲ ಪಕ್ಷದ ತದಿಗೆಯಂದು (ಅಕ್ಷಯ ತದಿಗೆ) ಈ ಉತ್ಸವವು ನಡೆಯಲಿದ್ದು, ಅಂದು ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ
ಬೆಳಿಗ್ಗೆ 8:30 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಶ್ರೀ ಮಹಾಗಣಪತಿ ಹೋಮ, ಶ್ರೀ ಚಂಡಿಕಾ ಹೋಮ, ಶ್ರೀ ಲಲಿತಾ ಹೋಮ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ, ಶ್ರೀ ರಾಮತಾರಕ ಹೋಮ, ಶ್ರೀ ಬಾಲತ್ರಿಪುರ ಸುಂದರಿ ಹೋಮ, ಶ್ರೀ ಗಾಯತ್ರಿ ಹೋಮ, ಶ್ರೀ ನವಗ್ರಹ ಹೋಮ, ಶ್ರೀ ರುದ್ರಹೋಮ ಹಾಗೂ ಶ್ರೀ ಅನ್ನಪೂರ್ಣ ಮೂಲ ಮಂತ್ರ ಹೋಮಗಳು ಜರುಗಲಿವೆ.ವೇದ ಪಾರಾಯಣ: ಹೋಮಗಳ ಜೊತೆಗೆ ವೇದ ಪಾರಾಯಣಗಳೂ ಸಂಪನ್ನಗೊಳ್ಳಲಿವೆ.
ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:30 ರ ಅವಧಿಯಲ್ಲಿ ವಿವಿಧ ಹೋಮಗಳ ಪೂರ್ಣಾಹುತಿ ನೆರವೇರಲಿದೆ.ಕ್ಷೇತ್ರದ ಧರ್ಮಕರ್ತರಾದ ಜಿ. ಭೀಮೇಶ್ವರ ಜೋಷಿ ಹಾಗೂ ಆಡಳಿತ ಮಂಡಳಿಯವರು ಸಮಸ್ತ ಭಕ್ತಾದಿಗಳು ಈ ಪುಣ್ಯ ಕಾರ್ಯಕ್ರಮದಲ್ಲಿ ಸಕುಟುಂಬ ಸಮೇತರಾಗಿ ಭಾಗವಹಿಸಿ, ಶ್ರೀ ಜಗನ್ಮಾತೆಯ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ವಿನಂತಿಸಿದ್ದಾರೆ
