
ಕಳಸ ಲೈವ್ ವರದಿ
ಕೂಟ ಮಹ ಜಗತ್ತು ಸಾಲಿಗ್ರಾಮ, ಕಳಸ-ಬಾಳೆಹೊಳೆ ಅಂಗ ಸಂಸ್ಥೆಯ ವತಿಯಿಂದ ಆಯೋಜಿಸಲಾದ 23ನೇ ವರ್ಷದ ‘ವಸಂತ ವೇದ ಶಿಬಿರ’ ಉದ್ಘಾಟನೆಯು ಇಲ್ಲಿನ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಿತು.
21 ದಿನಗಳ ಕಾಲ ನಡೆಯಲಿರುವ ಈ ಶಿಬಿರವನ್ನು ದೇವಸ್ಥಾನದ ವಹಿವಾಟುದಾರರಾದ ಶ್ರೀ ಟಿ. ಎಸ್. ದಿವಾಕರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ಬ್ಯಾಂಕಿನ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಶ್ರೀ ಎಂ. ಎಸ್. ಮಹಾಬಲೇಶ್ವರ ಅವರು ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಗಾಯತ್ರಿ ಮಂತ್ರದ ಮಹತ್ವ ಅನನ್ಯವಾದುದು. ಇದು ಬುದ್ಧಿಶಕ್ತಿ ಮತ್ತು ಏಕಾಗ್ರತೆಯನ್ನು ವೃದ್ಧಿಸುತ್ತದೆ, ಎಂದು ವಿದ್ಯಾರ್ಥಿಗಳಿಗೆ ಮಂತ್ರದ ಮಹಿಮೆಯನ್ನು ವಿವರಿಸಿದರು. ಶಿಬಿರಾರ್ಥಿಗಳಿಗೆ ಹಿತವಚನ ನೀಡಿದ ಶ್ರೀ ಕುಳಿಗಿತ್ತಲು ಮಹೇಶ್ ಭಟ್ ಅವರು, ಸಂಸ್ಕಾರಯುತ ಶಿಕ್ಷಣದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು.

ವೇದ ಶಿಬಿರಕ್ಕೆ ಅಗತ್ಯವಿರುವ ಸಂಪೂರ್ಣ ಆಹಾರ ಸಾಮಗ್ರಿಗಳನ್ನು ಹೊರನಾಡು ಶ್ರೀ ಕ್ಷೇತ್ರದ ಧರ್ಮಕರ್ತರಾದ ಪೂಜ್ಯ ಶ್ರೀ ಜಿ. ಭೀಮೇಶ್ವರ ಜೋಶಿ ಅವರು ಕೊಡುಗೆಯಾಗಿ ನೀಡಿದ್ದಾರೆ. ಅಲ್ಲದೆ, ಶಿಬಿರದ ಶಿಕ್ಷಕರ ಗೌರವ ಸಂಭಾವನೆಗಾಗಿ ಶಾಶ್ವತ ನಿಧಿಯನ್ನು ಸ್ಥಾಪಿಸಲು ಶ್ರೀ ಮಹಾಬಲೇಶ್ವರ ಭಟ್ ಎಂ. ಎಸ್. ಮಾವಿನಕುಡಿಗೆ ಅವರು 5 ಲಕ್ಷ ರೂಪಾಯಿಗಳ ಬೃಹತ್ ದೇಣಿಗೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀ ಕೆ. ಕೆ. ಬಾಲಕೃಷ್ಣ ಅವರು ಮಾತನಾಡಿ, ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸಮಾಜ ಬಾಂಧವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ವೇದಿಕೆಯಲ್ಲಿ ಅಂಗ ಸಂಸ್ಥೆಯ ಕಾರ್ಯದರ್ಶಿ ಶ್ರೀ ಎಚ್. ಎಸ್. ರಾಘವ ಹಾಗೂ ಖಜಾಂಚಿ ಶ್ರೀ ಸುಬ್ರಹ್ಮಣ್ಯ ಅಡಿಕೆಹಿತ್ತಲು ಉಪಸ್ಥಿತರಿದ್ದರು.
