ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಪುಣ್ಯಭೂಮಿ ಎಂದೇ ಖ್ಯಾತಿಯಾದ ಹೊಸದೇವರ ಚಾವಡಿಯು ಕಳೆದ ಮೂರು ದಿನಗಳಿಂದ ಭಕ್ತಿಯ ಸಾಗರದಲ್ಲಿ ಮಿಂದೆದ್ದಿತು. ಇಲ್ಲಿನ ಆರಾಧ್ಯ ದೈವಗಳ ನೇಮೋತ್ಸವವು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ವಿಜೃಂಭಣೆಯಿAದ ಜರುಗಿದ್ದು, ಸಾವಿರಾರು ಭಕ್ತರ ಪಾಲಿಗಿದು ಕೇವಲ ಉತ್ಸವವಾಗಿರದೆ, ಸಾಕ್ಷಾತ್ ದೈವ ದರ್ಶನದ ಪುಣ್ಯದಿನಗಳಾಗಿ ಸಾಕ್ಷಿಯಾದವು.

ಭಾನುವಾರದಿಂದ ಆರಂಭಗೊAಡ ಈ ಧಾರ್ಮಿಕ ವಿಧಿವಿಧಾನಗಳಲ್ಲಿ ಕರಾವಳಿ ಮತ್ತು ಮಲೆನಾಡಿನ ವಿಶಿಷ್ಟ ದೈವಾರಾಧನೆಯ ಪದ್ಧತಿಗಳು ಮೇಳೈಸಿದ್ದವು.
ಭಾನುವಾರದಿಂದ ನಡೆದ ನೇಮೋತ್ಸವದಲ್ಲಿ ಪಂಜುರ್ಲಿ ದೈವದ ಪ್ರತಿಷ್ಠೆ, ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ, ಶ್ರೀ ಅರಮನೆ ಜಟಿಗ, ಶ್ರೀ ರಾಜದೈವದ ನೇಮ ಉಯ್ಯಾಲೆ ಸೇವೆ, ದೂಮಾವತಿ ದೈವ, ಸೂರ್ಲುಮನೆ ಚೌಡಿ, ಮನಪಂಜುರ್ಲಿ, ಜಟಿಗ ದೈವದ ನೇಮ, ಧೂಮಾವತಿ ದೈವದ ಉಯ್ಯಾಲೆ ಸೇವೆ,ಅಡಕೋಡು ಚೌಡಿ, ನಂದಿಕೋಣ, ಬೇಟೆಗಾರ, ವೀರಹನುಮಂತ, ಪಂಜುರ್ಲಿ ದೈವದ ನೇಮ, ಅಡಕೋಡು ಚೌಡಿಯ ಹೇಳಿಕೆ ಕೇಳಿಕೆಗಳು ನಡೆಯಿತು.

ದೈವಗಳ ಉಯ್ಯಾಲೆ ಸೇವೆಯು ಭಕ್ತರ ಕಣ್ಮನ ಸೆಳೆಯಿತು. ತಾಸೆಯ ಹೊಡೆತ ಕೊಂಬು ವಾದ್ಯಘೋಷಗಳ ನಡುವೆ ದೈವದ ಪಾತ್ರಿಗಳು ದರ್ಶನ ನೀಡುತ್ತಿದ್ದ ದೃಶ್ಯ ಮೈಮನ ಪುಳಕಿತಗೊಳಿಸುವಂತಿತ್ತು.
ದೈವಾರಾಧನೆಯೆAದರೆ ಕೇವಲ ಆಚರಣೆಯಲ್ಲ, ಅದು ಸಾಮಾನ್ಯ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಅತೀಂದ್ರಿಯ ಶಕ್ತಿ ಎಂಬುದು ಇಲ್ಲಿ ಮತ್ತೊಮ್ಮೆ ಸಾಬೀತಾಯಿತು. ಕಷ್ಟ ಕಾಲದಲ್ಲಿ ನಾವು ನಂಬಿದ ದೈವಗಳು ಕೈ ಬಿಡುವುದಿಲ್ಲ ಎಂಬ ಅಚಲ ವಿಶ್ವಾಸದೊಂದಿಗೆ ಸಾವಿರಾರು ಭಕ್ತರು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ದೈವಗಳ ಮುಂದೆ ಬಿಚ್ಚಿಟ್ಟರು.

ದೈವಗಳ ಹೇಳಿಕೆ-ಕೇಳಿಕೆ ಕಾರ್ಯಕ್ರಮದಲ್ಲಿ ಭಕ್ತರ ಪ್ರಶ್ನೆಗಳಿಗೆ ದೈವವು ಅಭಯ ನೀಡಿದ ಕ್ಷಣಗಳು ಭಕ್ತರ ಕಣ್ಣಾಲಿಗಳನ್ನು ತೇವಗೊಳಿಸಿದವು. ತಾವು ಈ ಹಿಂದೆ ಹೊತ್ತಿದ್ದ ಹರಕೆಗಳನ್ನು ತೀರಿಸಿದ ಭಕ್ತಾದಿಗಳು, ಸಿರಿಗಂಧ ಪ್ರಸಾದವನ್ನು ಸ್ವೀಕರಿಸಿ ಧನ್ಯತಾ ಭಾವವನ್ನು ವ್ಯಕ್ತಪಡಿಸಿದರು.
ಕಳಸ ತಾಲ್ಲೂಕಿನ ಮೂಲೆ ಮೂಲೆಗಳಿಂದ ಬಂದ ಭಕ್ತಾದಿಗಳಿಗೆ ಈ ನೇಮೋತ್ಸವವು ಒಂದು ಸಾಮಾಜಿಕ ಸಮಾಗಮದ ವೇದಿಕೆಯೂ ಆಗಿತ್ತು. ಜಾತಿ-ಮತಗಳ ಬೇಧವಿಲ್ಲದೆ ದೈವದ ಸನ್ನಿಧಿಯಲ್ಲಿ ಎಲ್ಲರೂ ಒಂದಾಗಿ ನಿಂತು ಪ್ರಸಾದ ಸ್ವೀಕರಿಸಿದ್ದು ನಮ್ಮ ನಾಡಿನ ಭಾವೈಕ್ಯತೆಗೆ ಸಾಕ್ಷಿಯಾಯಿತು.
ಒಟ್ಟಾರೆಯಾಗಿ, ಹೊಸದೇವರ ಚಾವಡಿಯ ಈ ಮೂರು ದಿನಗಳ ನೇಮೋತ್ಸವವು ಭಕ್ತರ ಮನದಲ್ಲಿ ಭಕ್ತಿಯ ಚೇತನವನ್ನು ತುಂಬಿದ್ದು, ಕಳಸದ ಮಣ್ಣಿನ ದೈವಿಕ ಪರಂಪರೆಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಿತು.

