
ಕಳಸ ಲೈವ್ ವರದಿ
ಕರಾವಳಿ ಮತ್ತು ಮಲೆನಾಡಿನ ಗಡಿಭಾಗದ ಸಂಸ್ಕೃತಿಯಲ್ಲಿ ದೈವಾರಾಧನೆ ಎಂಬುದು ಕೇವಲ ಒಂದು ಆಚರಣೆಯಲ್ಲ; ಅದು ಬದುಕಿನ ಅವಿಭಾಜ್ಯ ಅಂಗ, ಕಷ್ಟಕಾಲದ ಭರವಸೆ ಮತ್ತು ಅನ್ಯಾಯದ ವಿರುದ್ಧದ ದನಿ. ಕುಂಬಳಡಿಕೆಯ ಪವಿತ್ರ ಕ್ಷೇತ್ರದಲ್ಲಿ ನಡೆದ ಕಾರಣಿಕ ಶಕ್ತಿಗಳಾದ ಶ್ರೀ ಕೊರಗಜ್ಜ ಮತ್ತು ಗುಳಿಗ ದೈವಗಳ ನೇಮೋತ್ಸವವು ಈ ನಂಬಿಕೆಯನ್ನು ಮತ್ತೊಮ್ಮೆ ಉತ್ತುಂಗಕ್ಕೆ ಕೊಂಡೊಯ್ದಿದೆ. ಸಾವಿರಾರು ಭಕ್ತರ ಕಣ್ಣುಗಳಲ್ಲಿ ಮಿನುಗಿದ ಭಕ್ತಿ ಮತ್ತು ದೈವದ ಅಭಯ ನುಡಿಗಳು ಸಮಾಜಕ್ಕೆ ಒಂದು ಸಾಂತ್ವನದ ಮಂತ್ರದAತೆ ಕೆಲಸ ಮಾಡಿವೆ.

ರಾತ್ರಿಯ ನಿಶ್ಯಬ್ದವನ್ನು ಭೇದಿಸುತ್ತಾ ಮೊಳಗಿದ ಚೆಂಡೆ-ತಾಸೆಯ ನಾದ, ವಿದ್ಯುತ್ ದೀಪಗಳ ಅಲಂಕಾರ, ಆಕರ್ಷಕ ಸುಡುಮದ್ದಿನ ಶಬ್ದದೊಂದಿಗೆ ಆವರಣದಲ್ಲಿ ನಡೆದ ಗುಳಿಗ ದೈವದ ಆವೇಶಭರಿತ ನರ್ತನವು ಭಕ್ತರ ಎದೆಯಲ್ಲಿ ಸಂಚಲನ ಮೂಡಿಸಿತು. ಅದು ಕೇವಲ ನೃತ್ಯವಾಗಿರಲಿಲ್ಲ, ಮನುಷ್ಯನ ಅಹಂಕಾರವನ್ನು ಅಡಗಿಸಿ ಧರ್ಮವನ್ನು ಎತ್ತಿಹಿಡಿಯುವ ರೌದ್ರಾವತಾರದಂತೆ ಕಂಡಿತು. ತದನಂತರ ದೊಂದಿ ಬೆಳಕಿನ ನಡುವೆ ನಡೆದ ಸ್ವಾಮಿ ಕೊರಗಜ್ಜನ ನೇಮೋತ್ಸವವು ಭಕ್ತರ ಪಾಲಿಗೆ ತಂಪಿನ ಮಳೆಯಂತೆ ಭಾಸವಾಯಿತು. ಅಜ್ಜನ ಆ ಶಾಂತ ರೂಪ, ನೀಡಿದ ಅಭಯದ ನುಡಿಗಳು ಮತ್ತು ಕಷ್ಟಗಳನ್ನೆಲ್ಲಾ ಮಡಿಲಿಗೆ ಹಾಕಿಕೊಳ್ಳುವ ಆ ಅತೀಂದ್ರಿಯ ಶಕ್ತಿಯು ನೆರೆದಿದ್ದ ಸಾವಿರಾರು ಭಕ್ತರನ್ನು ಭಕ್ತಿಪರವಶತೆಯ ಪರಾಕಾಷ್ಠೆಗೆ ತಲುಪಿಸಿತು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವಾರು ಗಣ್ಯರು ಮಾತ್ರವಲ್ಲದೆ, ಸಾಮಾನ್ಯ ಜನಸಾಮಾನ್ಯರೂ ಒಂದಾಗಿ ನಿಂತ ಈ ಉತ್ಸವದಲ್ಲಿ ಜಾತಿ-ಮತಗಳ ಹಂಗಿಲ್ಲದ ದೈವಿಕ ಸಮಾನತೆ ಎದ್ದು ಕಾಣುತ್ತಿತ್ತು. ಸಂಜೀವ ಮತ್ತು ರವಿಯವರ ನೇತೃತ್ವದ ಕಮಿಟಿಯ ಶಿಸ್ತುಬದ್ಧ ಸಂಘಟನೆ ಮತ್ತು ಅಚ್ಚುಕಟ್ಟಾದ ಅನ್ನದಾನ ವ್ಯವಸ್ಥೆಯು ಕೇವಲ ದೈವದ ಸೇವೆ ಮಾತ್ರವಲ್ಲದೆ, ಮಾನವೀಯ ಸೇವೆಯೂ ಹೌದು ಎಂಬುದನ್ನು ನಿರೂಪಿಸಿತು.
ನಂಬಿದವರ ಕೈಬಿಡದ ದೈವ ಎಂಬ ಮಾತಿಗೆ ಕುಂಬಳಡಿಕೆಯ ಈ ಸಂಭ್ರಮವು ಜೀವಂತ ಸಾಕ್ಷಿಯಾಗಿದೆ. ದೈವದ ಮಡಿಲಲ್ಲಿ ಕಷ್ಟಗಳನ್ನು ನಿವೇದಿಸಿಕೊಂಡು, ಸಿರಿಗಂಧ ಪ್ರಸಾದ ಹಣೆಗಿಟ್ಟು ಮರಳಿದ ಭಕ್ತರ ಮುಖದಲ್ಲಿ ಒಂದು ನಿಶ್ಚಿಂತೆಯ ಭಾವವಿತ್ತು. ಆಧುನಿಕತೆಯ ಅಬ್ಬರದ ನಡುವೆಯೂ ನಮ್ಮ ಮಣ್ಣಿನ ಈ ಸಾಂಸ್ಕೃತಿಕ ಪರಂಪರೆ ಮತ್ತು ನಂಬಿಕೆಯ ಬೇರುಗಳು ಅದೆಷ್ಟು ಗಟ್ಟಿಯಾಗಿವೆ ಎಂಬುದನ್ನು ಈ ನೇಮೋತ್ಸವವು ಜಗತ್ತಿಗೆ ಸಾರಿದೆ.
