ಕಳಸ ಲೈವ್ ವರದಿ
ಬೆಂಗಳೂರಿನಿ0ದ ಸಿಮೆಂಟ್ ತುಂಬಿಕೊAಡು ಹಿರೇಬೈಲಿಗೆ ಬರುತ್ತಿದ್ದ ಲಾರಿಯೊಂದು ಕೆಳಗೂರಿನ ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ. ಅಪಘಾತದಲ್ಲಿ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ.
ಶುಕ್ರವಾರ ಬೆಳಿಗ್ಗೆ ಸುಮಾರು 6 ಗಂಟೆಯ ವೇಳೆಗೆ ಈ ಅಪಘಾತ ಸಂಭವಿಸಿದೆ. ಕೆಳಗೂರಿನ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಯಿಂದ ಪಕ್ಕಕ್ಕೆ ಉರುಳಿ ಬಿದ್ದಿದೆ. ಕ್ಯಾಬಿನ್ನಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.
ಲಾರಿ ಉರುಳಿ ಬಿದ್ದ ಸ್ಥಳದ ಅಕ್ಕಪಕ್ಕದಲ್ಲಿ ಹಲವಾರು ಮನೆಗಳಿದ್ದು, ಅದೃಷ್ಟವಶಾತ್ ಲಾರಿ ಮನೆಗಳ ಮೇಲೆ ಬೀಳದೆ ಪಕ್ಕಕ್ಕೆ ಉರುಳಿದ್ದರಿಂದ ಭಾರಿ ಪ್ರಾಣಾಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ಕೆಳಗೂರಿನ ಈ ಅಪಾಯಕಾರಿ ಕಡಿದಾದ ತಿರುವಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಕೊರತೆ ಎದ್ದು ಕಾಣುತ್ತಿದೆ. ಇಲ್ಲಿ ಯಾವುದೇ ತಡೆಗೋಡೆ ಅಥವಾ ಎಚ್ಚರಿಕೆಯ ಸೂಚನಾ ಫಲಕಗಳು ಇಲ್ಲದಿರುವುದು ಸರಣಿ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಇಲ್ಲಿ ಅಪಘಾತಗಳು ಸಂಭವಿಸಿದ್ದು, ಈ ಬಗ್ಗೆ ಸಂಬAಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ತಿರುವಿನಲ್ಲಿ ಪದೇ ಪದೇ ಅನಾಹುತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ಕೂಡಲೇ ಇಲ್ಲಿ ಬಲಿಷ್ಠ ತಡೆಗೋಡೆ ನಿರ್ಮಿಸಬೇಕು ಮತ್ತು ಚಾಲಕರಿಗೆ ಎಚ್ಚರಿಕೆ ನೀಡುವ ಫಲಕಗಳನ್ನು ಅಳವಡಿಸಬೇಕು” ಎಂದು ಹಿರೇಬೈಲಿನ ಅರುಣ್ ಅವರು ಒತ್ತಾಯಿಸಿದ್ದಾರೆ
