
ಕಳಸ ಲೈವ್ ವರದಿ
ಅದು ಶುಕ್ರವಾರದ ಮುಂಜಾನೆ… ಕೆಳಗೂರಿನ ಆ ಕಡಿದಾದ ತಿರುವು ಮಸಣದ ಮೌನಕ್ಕೆ ಸಾಕ್ಷಿಯಾಗಬೇಕಿತ್ತು. ಆದರೆ, ಅಲ್ಲಿ ನಡೆದದ್ದು ಮನುಷ್ಯನ ಅಪ್ರತಿಮ ಸಾಹಸ ಮತ್ತು ಅಚಲವಾದ ಜೀವಪ್ರೇಮದ ಕಥೆ. ಬೆಂಗಳೂರಿನಿAದ ಸಿಮೆಂಟ್ ತುಂಬಿಕೊ0ಡು ಹಿರೇಬೈಲಿನತ್ತ ಸಾಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾದಾಗ, ಚಾಲಕ ಸಂತೋಷ್ ಪಾಲಿಗೆ ಕಾಲ ಅಕ್ಷರಶಃ ನಿಂತುಹೋಗಿತ್ತು.
ಸುಮಾರು 6 ಗಂಟೆಯ ಹೊತ್ತಿಗೆ ಲಾರಿ ಉರುಳಿ ಬಿದ್ದಾಗ, ಅದರ ಕ್ಯಾಬಿನ್ ಚಾಲಕ ಸಂತೋಷ್ನನ್ನು ಉಸಿರುಗಟ್ಟುವಂತೆ ಅವಿತ್ತಿತ್ತು. ಕಬ್ಬಿಣದ ಸರಳುಗಳ ಮಧ್ಯೆ ಸಿಲುಕಿ, ಕಾಲು ಮುರಿದು, ರಕ್ತದ ಮಡುವಿನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆ ಯುವಕನ ಆರ್ತನಾದ ಮುಗಿಲು ಮುಟ್ಟಿತ್ತು. ಒಂದು ಕ್ಷಣದ ಅಚಾತುರ್ಯ ಇಡೀ ಕುಟುಂಬದ ಆಧಾರಸ್ತಂಭವನ್ನೇ ಅಲುಗಾಡಿಸಿಬಿಟ್ಟಿತ್ತು.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಬಾಳೂರು ಪೊಲೀಸರು, ಮೂಡಿಗೆರೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ನಡೆಸಿದ ಕಾರ್ಯಾಚರಣೆ ಅಕ್ಷರಶಃ ಯುದ್ಧದಂತಿತ್ತು. ಕ್ರೇನ್ ಬಂತು, ಹಾರೆ-ಗುದ್ದಲಿಗಳು ಬಂದವು, ಆದರೆ ಕ್ಯಾಬಿನ್ ಒಳಗಿದ್ದ ಚಾಲಕನನ್ನು ಹೊರತೆಗೆಯುವುದು ಕಷ್ಟವಾಗಿತ್ತು.

ಈ ಇಡೀ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸುನೀಲ್ ಎಂಬುವವರು ನಿಜವಾದ ಜೀವ ರಕ್ಷಕರಾದರು. ಲಾರಿಯ ಅಡಿಯಲ್ಲಿ ಚಾಲಕ ಸಿಲುಕಿದ್ದ ಆ ಅಪಾಯಕಾರಿ ಜಾಗಕ್ಕೆ ತನ್ನ ಪ್ರಾಣದ ಹಂಗು ತೊರೆದು ನುಗ್ಗಿದ ಸುನೀಲ್ ಅಂಜದೆ ಹೋರಾಡಿದರು.
ಅಲ್ಲಿ ಸುನೀಲ್ ತೋರಿದ ಧೈರ್ಯ ಅಸಾಮಾನ್ಯವಾದದ್ದು. ತನ್ನ ಜೀವವನ್ನೇ ಪಣಕ್ಕಿಟ್ಟು ಸಂತೋಷನನ್ನು ಆ ಕಬ್ಬಿಣದ ಗುಪ್ಪೆಯಿಂದ ಹೊರತಂದ ರೀತಿ ನೋಡಿದರೆ ಕಣ್ಣಾಲಿಗಳು ಒದ್ದೆಯಾಗುತ್ತವೆ. ಸುನೀಲ್ ಇಂದು ನಿಜವಾದ ಹೀರೋ, ಅಲ್ಲದೆ ಬಾಳೂರು ಸಬ್ ಇನ್ಸ್ ಪೆಕ್ಟರ್ ದಿಲೀಪ್ ಅವರ ಮುಂದಾಳಾತ್ವ ನಿಜಕ್ಕೂ ಮಾನವೀಯತೆ ತೋರಿಸಿತು ಎಂದು ಘಟನೆಯ ಪ್ರತ್ಯಕ್ಷದರ್ಶಿ ಹಿರೇಬೈಲಿನ ಅರುಣ್ ಭಾವುಕರಾಗಿ ನುಡಿದರು.

ಸತತ ಐದೂವರೆ ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯ ಅಂತ್ಯದಲ್ಲಿ, ಸಂತೋಷ್ನನ್ನು ಜೀವಂತವಾಗಿ ಹೊರತೆಗೆದಾಗ ನೆರೆದಿದ್ದವರ ಕಣ್ಣಲ್ಲಿ ಆನಂದಬಾಷ್ಪ ಸುರಿಯಿತು. ಕಾಲು ಮುರಿತದ ತೀವ್ರ ನೋವಿನ ನಡುವೆಯೂ ಆತ ಕಣ್ಣು ಬಿಟ್ಟಾಗ ಕಂಡಿದ್ದು ಮನುಷ್ಯತ್ವದ ವಿಜಯವನ್ನು. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತೋಷ್ ಈಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆಳಗೂರಿನ ಆ ತಿರುವು ಇಂದು ಒಂದು ದುರಂತಕ್ಕೆ ಸಾಕ್ಷಿಯಾಗುವ ಬದಲು, ಶ್ರಮ, ಸಾಹಸ ಮತ್ತು ಸಕಾಲಿಕ ಸ್ಪಂದನೆಯಿAದ ಒಂದು ಜೀವವನ್ನು ಹೇಗೆ ಉಳಿಸಬಹುದು ಎಂಬ ಸ್ಫೂರ್ತಿದಾಯಕ ಕಥೆಗೆ ವೇದಿಕೆಯಾಯಿತು
