ಕಳಸ ಲೈವ್ ವರದಿ
ಕರ್ನಾಟಕ ಜಾನಪದ ಪರಿಷತ್ತು ಕಳಸ ಘಟಕದಿಂದ ಸೋಮವಾರ ಮಲೆನಾಡಿನ ವಿಶಿಷ್ಟ ಕಲೆಯಾದ ಅಂಟಿಕೆ ಪಿಂಟಿಕೆ ತಂಡವನ್ನು ಬರಮಾಡಿಕೊಂಡು ಹಿರಿಯ ಕಲಾವಿದರನ್ನು ಗೌರವಿಸಲಾಯಿತು.
ಅಂಟಿಕೆ ಪಿಂಟಿಕೆ ಎಂದರೆ ದೀಪದಿಂದ ದೀಪಗಳನ್ನು ಬೆಳಗಿಸುವ ಪದ್ಧತಿ .ದೀಪಾವಳಿಯ ಬಲಿಪಾಢ್ಯಮಿ ದಿನದಿಂದ ಮೂರು ದಿನಗಳ ವರೆಗೆ ರಾತ್ರಿ ಮನೆಮನೆಗೆ ದೀಪದಿಂದ ದೀಪ ನೀಡುವ ಸಂಪ್ರದಾಯವಿದು. ಜಾನಪದ ಸೊಗಡಿನ ಕಥಾಹಂದರದ ಜಾನಪದ ಹಾಡು ಹೇಳುವುದು, ವಿವಿಧ ವೇಷದಾರಿಗಳಿಂದ ಕುಣಿತ ದೊಂದಿಗೆ ಮನರಂಜನೆ ನೀಡುತ್ತ ದೀಪಾವಳಿಗೆ ತನ್ನದೆ ಆದ ಮೆರುಗನ್ನು ತುಂಬುತ್ತಾರೆ. ಮನರಂಜನೆಯ ಜತೆಗೆ ಬದುಕಿನ ಸಂದೇಶವನ್ನೂ ಹೇಳುತ್ತದೆ. ಈ ಸಂಪ್ರದಾಯಕ್ಕೆ ಅನೇಕ ವರ್ಷಗಳ ಹಿನ್ನಲೆ ಇದ್ದರೂ ಕೂಡ ಇತ್ತೀಚೆಗಿನ ವರ್ಷಗಳಲ್ಲಿ ಇದರ ಆಕರ್ಷಣೆ ಸ್ವಲ್ಪ ಕಡಿಮೆಯಾಗಿರುವುದು ಕೂಡ ನಿಜ.
ಕಳಸ ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಸಾಂಪ್ರದಾಯಿಕವಾಗಿ ನಡೆದು ಕೊಂಡು ಬರುತ್ತಿದ್ದ ಮಲೆನಾಡಿನ ವಿಶಿಷ್ಠ ಕಲೆಯಾದ ಅಂಟಿಕೆ ಪಿಂಟಿಕೆ ಕೊರೋನ ಬಂದ ನಂತರ ಇದರ ಆಚರಣೆ ಸ್ಥಗಿತಗೊಂಡಿತ್ತು. ಈ ಬಾರಿ ಮತ್ತೆ ಪ್ರಾರಂಭಗೊಂಡ ಕಳಸದ ಮುಮ್ಮಗೆ ಅಂಟಿಕೆ ಪಿಂಟಿಕೆ ತಂಡ ಕಳಸದ ಕೊಟ್ಟಿಗೆ ಮಕ್ಕಿ ಸತೀಶ್ ಭಟ್ ಅವರ ಮನೆಗೆ ಬಂದ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಸದಸ್ಯರು ಭಾಗವಹಿಸಿ ಕಲಾವಿಧರನ್ನು ಪ್ರೋತ್ಸಾಹಿಸುವುದರ ಜೊತೆ ಅವರನ್ನು ಗೌರವಿಸುವ ಕಾರ್ಯವನ್ನು ಕೂಡ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಆ.ರಾ.ಸತೀಶ್ಚಂದ್ರ ಅಂಟಿಕೆ ಪಿಂಟಿಕೆಯಂತ ಜಾನಪದ ಕಲೆಗಳು ಎಲ್ಲೋ ಮರೆಯಾಗಿ ಹೋಗುತ್ತಿದೆ ಎನ್ನುವ ಸಂದರ್ಭದಲ್ಲಿ ಹಿರಿಯರ ನೇತ್ರತ್ವದಲ್ಲಿ ಯುವಕರ ತಂಡವನ್ನು ಕಟ್ಟಿಕೊಂಡು ಅದಕ್ಕೆ ಮತ್ತೆ ಜೀವ ತುಂಬುತ್ತಿರುವುದು ನೀಜವಾಗಿಯು ಕುಷಿ ತರುವ ಕೆಲಸವಾಗಿದೆ. ಇಂತಹ ಕಾರ್ಯಗಳಿಗೆ ಜಾನಪದ ಪರಿಷತ್ತು ಪ್ರೋತ್ಸಾಹ ನೀಡುತ್ತಿರುವುದರಿಂದ ಇಂತಹ ಕಲೆಗಳನ್ನು ಮುಂದುವರೆಸಿಕೊಂಡು ಹೋಗಲು ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ರಜಿತ್ ಕೆಳಗೂರು ಮಾತನಾಡಿ ಗೌಡಲು ಸಮುದಾಯದ ಕಲಾವಿದರು ಈ ಅಂಟಿಕೆ ಪಿಂಟಿಕೆ ಕಾರ್ಯಕ್ರಮಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ರೀತಿ ಹಾಗೂ ಜ್ಯೋತಿ ಬೆಳಗುವಿಕೆಗೆ ಕೊಡುವ ಗೌರವ ಕಲಾತಂಡಗಳಿರುವ ಶಿಸ್ತು ನಾವೆಲ್ಲರೂ ಪರಿಪಾಲಿಸಲೇಬೇಕು.ಜೊತೆಗೆ ಅಂಟಿಕೆ ಪಿಂಟಿಕೆ ಮಲೆನಾಡಿನ ಮೂಲ ಜನಪದ ಕಲೆಯಾಗಿದ್ದು ಇದರ ಶ್ರೀಮಂತಿಕೆಯನ್ನು ನಾವು ರಾಜ್ಯದಾದ್ಯಂತ ಪಸರಿಸುವ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಟಿಕೆ ಪಿಂಟಿಕೆ ಕೂಟದ ಯಜಮಾನ ವೀರಪ್ಪ ಗೌಡ, ಚಂದ್ರೇಗೌಡ ಮುಖ್ಯ ಹಾಡುಗಾರರು, ವಿಘ್ನೇಶ್ ಹಾಡುಗಾರರು ಇವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ, ಕಜಾಪ ಸದಸ್ಯರಾದ ಸುಮನ ಜಯರಾಜ್, ನಿಖಿತಾ ಸಂತೋಷ್, ಶಮೀರ್, ಪ್ರಶಾಂತ್ ಹೆಚ್.ಆರ್, ಪ್ರಿಯಾ ಗುರುಪ್ರಸಾದ್, ಕಸಾಪ ಸದಸ್ಯರಾದ ಜಾನಕಿ ಸುಂದರೇಶ್, ರೇವತಿ ಶಿವಪ್ಪ, ಪ್ರತಿಮಾ, ಲೀಲಾ ಶ್ರೀಕಾಂತ್, ರಾಧಿಕಾ, ಪೌಜಿಯಾ, ನಾಗಮಣಿ ಇತರರು ಇದ್ದರು.