
ಕಳಸ ಲೈವ್ ವರದಿ
“ಜಾನಪದ ಎಂಬುದು ಕೇವಲ ಹಾಡು ಅಥವಾ ನೃತ್ಯವಲ್ಲ, ಅದು ನಮ್ಮ ಮಣ್ಣಿನ ಜೀವನಾಡಿ. ಅಕ್ಷರ ಜ್ಞಾನವಿಲ್ಲದ ನಮ್ಮ ಹಿರಿಯರು ತಮ್ಮ ಜೀವನದ ಸುದೀರ್ಘ ಅನುಭವದ ಮೂಲಕ ಕಟ್ಟಿಕೊಟ್ಟ ಬದುಕು ಇದು,” ಎಂದು ಕಳಸ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಅಜಿತ್ ಪ್ರಸಾದ್ ಅವರು ಅಭಿಪ್ರಾಯಪಟ್ಟರು.
ಇಲ್ಲಿನ ಪ್ರಬೋಧಿನಿ ವಿದ್ಯಾಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ಜಾನಪದ ಪರಿಷತ್ತಿನ ಸಂಸ್ಥಾಪನಾ ದಿನ ಹಾಗೂ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು, “ವೇದ ಸುಳ್ಳಾದ್ರೂ ಗಾದೆ ಸುಳ್ಳಾಗದು ಎಂಬ ಮಾತಿನಂತೆ, ನಮ್ಮ ಜನಪದರ ಮಾತುಗಳಲ್ಲಿ ಅಡಗಿರುವ ಸತ್ಯ ಇಂದು ಆಧುನಿಕ ವಿಜ್ಞಾನಕ್ಕೂ ಮಿಗಿಲಾದದ್ದು. ಯಾವುದೇ ಒಂದು ಸಂಸ್ಥೆ ಹತ್ತು ವರ್ಷಗಳ ಕಾಲ ಸತತವಾಗಿ ಕೆಲಸ ಮಾಡುವುದು ಸುಲಭದ ಮಾತಲ್ಲ. ಜಾನಪದ ಕಲೆಗಳು ಅಳಿವಿನ ಅಂಚಿನಲ್ಲಿವೆ ಎಂಬ ಆತಂಕದ ನಡುವೆ, ಈ ಪರಿಷತ್ತು ಹೊಸ ತಲೆಮಾರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಕಳಸದಂತಹ ಸಾಂಸ್ಕೃತಿಕ ಶ್ರೀಮಂತಿಕೆ ಇರುವ ನೆಲದಲ್ಲಿ ಜಾನಪದ ಪರಿಷತ್ತು ಗಟ್ಟಿಯಾಗಿ ನೆಲೆನಿಂತಿರುವುದು ಹೆಮ್ಮೆಯ ವಿಷಯ,
ಇಂದಿನ ಮೊಬೈಲ್ ಯುಗದ ಯುವಕರಿಗೆ ಡೊಳ್ಳು ಕುಣಿತ, ಸೋಬಾನೆ ಪದಗಳು ಹಾಗೂ ಕರಕುಶಲ ಕಲೆಗಳ ಮಹತ್ವವನ್ನು ತಿಳಿಸಿಕೊಡುವುದು ಇಂದಿನ ಅಗತ್ಯವಾಗಿದೆ. ಈ ದಶಮಾನೋತ್ಸವದ ಸಂದರ್ಭದಲ್ಲಿ ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ಹಿರಿಯರ ಬಾಯಲ್ಲಿ ಉಳಿದಿರುವ ಗಾದೆ ಹಾಗೂ ಹಾಡುಗಳನ್ನು ದಾಖಲೀಕರಣ ಮಾಡುವುದು ಮತ್ತು ಬಡತನದ ನಡುವೆಯೂ ಕಲೆಯನ್ನು ಉಳಿಸಿದ ಗ್ರಾಮೀಣ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮಹತ್ವದ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಆಶ್ರಿತಾ ರೈ ಹಾಗೂ ಅದ್ಭುತ ಸ್ಮರಣ ಶಕ್ತಿಯ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ಗೆ ಸೇರ್ಪಡೆಯಾದ ವಿದ್ಯಾರ್ಥಿ ಪ್ರಣೀಕ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿಯ ಕಾರ್ಯದರ್ಶಿ ರಾಘವೇಂದ್ರ, ಮುಖ್ಯ ಶಿಕ್ಷಕ ಆನಂದ್, ಕಜಾಪ ಮಹಿಳಾ ಘಟಕದ ಅಧ್ಯಕ್ಷೆ ಸುಜಯ ಸದಾನಂದ, ಪ್ರಮುಖರಾದ ಪಾಂಡುರAಗ, ಕಲ್ಪನಾ ಅಜಿತ್, ಭರತ್ರಾಜ್, ಶಾಲಿನಿ ವಿಜಯ್, ಶಶಿಕಲಾ, ಪ್ರತಿಮಾ, ಸಾತ್ವಿಕ್, ದಿವ್ಯಾ, ಉಷಾ, ಆಶಾ ಹಾಗೂ ಇತರರು ಉಪಸ್ಥಿತರಿದ್ದರು.
