
ಕಳಸ ಲೈವ್ ವರದಿ
ಒಂದು ಕಡೆ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧದ ಕಾರ್ಮೋಡ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸುತ್ತಿದ್ದರೆ, ಅದರ ಬಿಸಿ ಮಲೆನಾಡಿನ ಪುಟ್ಟ ಪಟ್ಟಣ ಕಳಸಕ್ಕೂ ತಟ್ಟಿದೆ. ಬುಧವಾರ ಕಳಸದ ಇಂಡಿಯನ್ ಗ್ಯಾಸ್ ವಿತರಣಾ ಕೇಂದ್ರದಲ್ಲಿ ಅಡುಗೆ ಅನಿಲಕ್ಕಾಗಿ ಗ್ರಾಹಕರು ಬೆಳ್ಳಂಬೆಳಿಗ್ಗೆಯಿ0ದಲೇ ಜಮಾಯಿಸಿ, ಸಿಲಿಂಡರ್ ಸಿಗದೆ ನಿರಾಸೆಯಿಂದ ಮನೆಗೆ ಮರಳಿದ ಘಟನೆ ನಡೆದಿದೆ.
ಮುಂದಿನ ದಿನಗಳಲ್ಲಿ ಯುದ್ಧದ ಕಾರಣದಿಂದ ಗ್ಯಾಸ್ ಅಭಾವ ಉಂಟಾಗಬಹುದು ಎಂಬ ಭೀತಿಯಿಂದ ಅನೇಕ ಗ್ರಾಹಕರು ಅವಧಿಗೂ ಮುನ್ನವೇ ಸಿಲಿಂಡರ್ ಖರೀದಿಸಲು ಮುಂದಾಗಿದ್ದರು. ಆದರೆ, ಗ್ಯಾಸ್ ಬುಕ್ಕಿಂಗ್ ಆಗದ ಕಾರಣ ವಿತರಕರು ಸಿಲಿಂಡರ್ ನೀಡಲು ನಿರಾಕರಿಸಿದರು. ಇದರಿಂದಾಗಿ ದೂರದ ಊರುಗಳಿಂದ ಬಂದಿದ್ದ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿ ಬರಿಗೈಲಿ ವಾಪಸ್ಸಾಗಬೇಕಾಯಿತು.
ಕೇವಲ ಗೃಹಬಳಕೆಯಷ್ಟೇ ಅಲ್ಲದೆ, ವಾಣಿಜ್ಯ ಬಳಕೆಯ ಗ್ಯಾಸ್ ಸರಬರಾಜಿನಲ್ಲೂ ಭಾರೀ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಕಳಸದ ಹೋಟೆಲ್ಗಳು, ಹೋಂ ಸ್ಟೇಗಳು ಮತ್ತು ರೆಸಾರ್ಟ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಕಾಲಕ್ಕೆ ಗ್ಯಾಸ್ ಸಿಗದೆ ಪ್ರವಾಸಿಗರಿಗೆ ಸೇವೆ ನೀಡಲು ಹರಸಾಹಸ ಪಡುವಂತಾಗಿದೆ. ಈಗಾಗಲೇ ತಿಂಗಳಿಗೆ ಒಂದೇ ಸಿಲಿಂಡರ್ ನೀಡಲಾಗುತ್ತಿದ್ದು, ಅದರಲ್ಲೂ ವ್ಯತ್ಯಯ ಉಂಟಾಗುತ್ತಿರುವುದು ಈ ಭಾಗದ ಉದ್ದಿಮೆದಾರರ ನಿದ್ದೆಗೆಡಿಸಿದೆ.
ಗುರುವಾರದಿಂದ ವಿತರಣೆ ಆರಂಭ
ಈ ಕುರಿತು ಮಾಹಿತಿ ನೀಡಿರುವ ಇಂಡಿಯನ್ ಗ್ಯಾಸ್ ವಿತರಕರು, “ಬುಧವಾರ ಸಂಜೆಯಿ0ದ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಿದೆ. ಪ್ರಸ್ತುತ ೩೨೪ ಸಿಲಿಂಡರ್ಗಳ ದಾಸ್ತಾನು ಬಂದಿದ್ದು, ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಗುರುವಾರ ಬೆಳಿಗ್ಗೆಯಿಂದ ವಿತರಣೆ ಮಾಡಲಾಗುವುದು. ಆದರೆ, ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಸರಬರಾಜು ಇಲ್ಲದ ಕಾರಣ ಅವುಗಳ ವಿತರಣೆ ಸದ್ಯಕ್ಕೆ ಇರುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಜಾಗತಿಕ ಯುದ್ಧದ ಭೀತಿ ಮತ್ತು ಗ್ಯಾಸ್ ವಿತರಣೆಯಲ್ಲಾದ ತಾಂತ್ರಿಕ ಅಡಚಣೆಗಳು ಕಳಸದ ಜನಸಾಮಾನ್ಯರ ಅಡುಗೆಮನೆಗೆ ನೇರವಾಗಿ ತಟ್ಟುತ್ತಿವೆ.
