ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಕೊಂಡದಮನೆ ಗ್ರಾಮಸ್ಥರ ಹಲವು ದಶಕಗಳ ಬೇಡಿಕೆಯಾಗಿದ್ದ ಕಾಂಕ್ರೀಟ್ ರಸ್ತೆಯು ನನಸಾದ ಹಿನ್ನಲೆಯಲ್ಲಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಕಳಸ ಪಟ್ಟಣದಿಂದ ಕೆಲವೇ ಕಿ.ಮೀ ದೂರದಲ್ಲಿ ಸುಮಾರು 15 ಗಿರಿಜನ ಕುಟುಂಬಗಳು ವಾಸ ಮಾಡುವ ಕೊಂಡದಮನೆ ಗ್ರಾಮಕ್ಕೆ ಸರಿಯಾದ ರಸ್ತೆ ಸೌಕರ್ಯವಿಲ್ಲದೆ ಸಾಕಷ್ಟು ತೊಂದರೆ ಪಡುತ್ತಿದ್ದರು. ಈ ರಸ್ತೆಯು ಹೊಂಡ ಗುಂಡಿಯಿಂದ ತುಂಬಿ ಹೋಗಿದ್ದ ಕಚ್ಚಾ ರಸ್ತೆಯಲ್ಲಿ ಓಡಾಟವೇ ನಿತ್ಯ ನರಕಯಾತನೆಯಾಗಿತ್ತು. ಮಳೆಗಾಲದಲ್ಲಿ ಕೆಸರು ತುಂಬಿದ ರಸ್ತೆಯಲ್ಲಿ ಮಾರುದ್ದ ಗುಂಡಿಗಳ ದರ್ಶನದಿಂದ ತಮ್ಮ ಗ್ರಾಮಕ್ಕೆ ತೆರಳಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು.ಶಾಲಾ ಕಾಲೇಜಿಗೆ ಹೋಗುವ ಶಾಲಾ ಮಕ್ಕಳಿಗಂತೂ ದಿನ ನಿತ್ಯ ಐದು ಕಿ.ಮೀ ಕಲ್ನಾಡಿಗೆಯೇ ಮಾಮೂಲಿಯಾಗಿತ್ತು. ಬಾಡಿಗೆ ವಾಹನಗಳು ಇತ್ತ ಕಡೆ ಮುಖನೇ ಮಾಡುತ್ತಿರಲಿಲ್ಲ.
ಗ್ರಾಮಕ್ಕೆ ತೆರಳುವ ರಸ್ತೆಯ ದುಸ್ಥಿತಿಯಿಂದ ಬೇಸೆತ್ತ ಗ್ರಾಮಸ್ಥರು ಸಾಕಷ್ಟು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೊರೆ ಹೋಗಿ ಕೈ ಚೆಲ್ಲಿ ಕುಳಿತಿದ್ದರು. ಚುನಾವಣೆ ಬಹಿಷ್ಕಾರದ ಮುಖಾಂತರು ಬಿಸಿ ಮುಟ್ಟಿಸಿದ್ದರು ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ.
ಆದರೆ ಈ ಭಾರಿಯ ಶಾಸಕರ ಚುನಾವಣೆಯಲ್ಲಿ ಕೊಂಡದ ಮನೆ ಗ್ರಾಮದ ಜನರಿಗೆ ಮಾಜಿ ತಾ.ಪಂ ಸದಸ್ಯ ಮಹಮ್ಮದ್ ರಫೀಕ್ ಗ್ರಾಮಕ್ಕೆ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಿಸಿ ಕೊಡುವ ಭರವಸೆಯನ್ನು ನೀಡಿದ್ದರು. ಕೊಟ್ಟ ಮಾತಿನಂತೆ ಚುನಾವಣೆಯ ನಂತರದಲ್ಲಿ ಶಾಸಕರಾದ ನಯನಾ ಮೋಟಮ್ಮನವರ ಗಮನಕ್ಕೆ ತಂದು ಗ್ರಾಮಕ್ಕೆ ಕಾಂಕ್ರೀಟ್ ರಸ್ತೆಯನ್ನು ಮಾಡಲಾಗಿದೆ. ಇದರಿಂದ ಈ ಗ್ರಾಮದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದು, ಮಹಮ್ಮದ್ ರಫೀಕ್ ಹಾಗೂ ಶಾಸಕಿ ನಯನಾ ಮೋಟಮ್ಮನರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಈ ಸಂದರ್ಭಲ್ಲಿ ಗ್ರಾಮಸ್ಥರಾದ ಲೋಹಿತ್, ರವೀಂದ್ರ, ಸೀತಮ್ಮ, ಯಶೋಧ, ಲೋಕೇಶ್, ಅಶೋಕ, ಶೇಷ, ವೆಂಕಟೇಶ್, ಬೆಳ್ಳಮ್ಮ ಇತರರು ಇದ್ದರು.
ಲೋಹಿತ್, ಗ್ರಾಮಸ್ಥ
ನಮ್ಮ ಗ್ರಾಮಕ್ಕೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ಒಂದು ಕುಗ್ರಾಮವೇ ಆಗಿತ್ತು.ಇಲ್ಲಿರುವ 15 ಕುಟುಂಬಗಳು ಗಿರಿಜನ ಕುಟುಂಬಗಳಾಗಿದ್ದವು. ನಮ್ಮ ಗ್ರಾಮದ ರಸ್ತೆಗಾಗಿ ಹಲವು ವರ್ಷಗಳಿಂದ ಬೇಡಿಕೆ ಇಡುತ್ತಿದ್ದೇವು.ಆದರೆ ರಸ್ತೆ ಮಾಡಿಕೊಡುವ ದೊಡ್ಡ ಮನಸ್ಸನ್ನು ಯಾರೂ ಮಾಡಿರಲ್ಲಿಲ್ಲ.ಆದರೆ ಈ ಬಾರಿಯ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಮಾಜಿ.ತಾ.ಪಂ ಸದಸ್ಯ ಮಹಮ್ಮದ್ ರಫೀಕ್ ಅವರ ಮನವಿಯಂತೆ ಶಾಸಕರಾದ ನಯನಾ ಮೋಟಮ್ಮ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ.ಅವರಿಗೆ ನಾವು ಗ್ರಾಮಸ್ಥರು ಅಭಿನಂದನೆ ಸಲ್ಲಿಸುತ್ತೇವೆ.